ಕಡೂರು: ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಪ್ರಾಯೋಗಿಕವಾಗಿ ಹರಿಸಲಾಗಿರುವ ನೀರು ಈ ಭಾಗದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಆದರೆ ಯೋಜನೆಯ ವ್ಯಾಪ್ತಿಗೆ ಒಳಪಡುವ ಚೌಳಹಿರಿಯೂರು ಹೋಬಳಿಯಲ್ಲಿ ಬಾಕಿ ಉಳಿದ 23 ಸಣ್ಣ ಕೆರೆ-ಕಟ್ಟೆಗಳಿಗೆ ಶೀಘ್ರವಾಗಿ ನೀರು ಹರಿಸಲು ಅಗತ್ಯವಿರುವ ಪೈಪ್ಲೈನ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಿದೆ ಎಂದು ನಿಗಮದ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ಸೂಚಿಸಿದರು.
ಗುಮ್ಮನಹಳ್ಳಿಯಲ್ಲಿ ಭಾನುವಾರ ವಿಶ್ವೇಶ್ವರಯ್ಯ ಜಲ ನಿಗಮದ ಚೌಳಹಿರಿಯೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಭದ್ರಾ ಮೇಲ್ದಂಡೆ ಯೋಜನೆಯಿಂದ ಕೆರೆ ತುಂಬಿಸುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಈ ಭಾಗದಲ್ಲಿ ನಿರಂತರ ಅಭಾವ ಪರಿಸ್ಥಿತಿ ಇದ್ದು ಅಂತರ್ಜಲ ಮಟ್ಟ ತೀವ್ರ ಕುಸಿದಿದೆ. ಪ್ರಸ್ತುತ ಪರೀಕ್ಷಾರ್ಥವಾಗಿ 3 ಟಿಎಂಸಿ ನೀರನ್ನು ಹರಿಸಲಾಗಿದ್ದು ಅಂತರಗಟ್ಟೆ, ಕಲ್ಕೆರೆ, ಕುಕ್ಕಸಮುದ್ರ ಹಾಗೂ ಚೌಳಹಿರಿಯೂರು ಕೆರೆಗಳು ಭರ್ತಿಯಾಗಿವೆ. ಆದರೆ ಈ ಭಾಗದ ರೈತರ ಕಷ್ಟ ಬಗೆಹರಿಯಬೇಕಾದರೆ ಇನ್ನುಳಿದ 23 ಕೆರೆಗಳಿಗೆ ನೀರು ತಲುಪುವುದು ಅತ್ಯಗತ್ಯವಾಗಿದೆ ಎಂದರು.
ಈಗಾಗಲೇ 28 ಕೆರೆಗಳ ಪೈಕಿ ಪ್ರಸ್ತುತ ಕೆಲವೇ ಕೆರೆಗಳಿಗೆ ನೀರು ತಲುಪಿದೆ. ಇನ್ನುಳಿದ ಕೆರೆಗಳಿಗೆ ನೀರು ಹರಿಸಲು ಸುಮಾರು 7 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಂಡೆ ಸೀಳುವ ಹಾಗೂ ಪೈಪ್ಲೈನ್ ಅಳವಡಿಸುವ ಕಾಮಗಾರಿ ಬಾಕಿ ಇದೆ. ಕಂಟ್ರಾೃಕ್ಟರ್ ಹಾಗೂ ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳು ಶ್ರಮವಹಿಸಿ ಇನ್ನು 2-3 ತಿಂಗಳೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ರೈತರಿಗೆ ನೆರವಾಗಬೇಕಿದೆ ಎಂದರು.
ವಿಶ್ವೇಶ್ವರಯ್ಯ ಜಲನಿಗಮದ ಇಇ ಪ್ರಕಾಶ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ಕೈಗೊಳ್ಳಲಾಗಿರುವ ಚಿತ್ರದುರ್ಗ ಬ್ರಾಂಚ್ ಕೆನಾಲ್ ಮತ್ತು ಕಡೂರು ತಾಲೂಕಿಗೆ ಸಂಬಂಧಿಸಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಬರುವ ಜನವರಿ ಹಾಗೂ ಜೂನ್ ವೇಳೆಗೆ ಕೆರೆಗಳಿಗೆ ನೀರು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. 2019ರಲ್ಲೇ ಕಾಮಗಾರಿಯ ಒಪ್ಪಂದ ಮಾಡಿಕೊಂಡಿದ್ದರೂ ಹೆಚ್ಚಿನ ಪರಿಹಾರಕ್ಕಾಗಿ ರೈತರು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಚಿತ್ರದುರ್ಗ ಬ್ರಾಂಚ್ ಕೆನಾಲ್ ಕಾಮಗಾರಿ ವಿಳಂಬವಾಗಿತ್ತು. ಮುಖ್ಯಮಂತ್ರಿ ಅವರ ಮಧ್ಯಸ್ಥಿಕೆ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಸಂತ್ರಸ್ತ ರೈತರಿಗೆ ಪರಿಹಾರ ವಿತರಿಸಲಾಗಿದ್ದು, ಸ್ಥಗಿತಗೊಂಡಿದ್ದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಹೂಲಿಹಳ್ಳಿ ಬಳಿ ಇದ್ದ ಬಂಡೆ ತೆರವುಗೊಳಿಸುವ ಶೇ.80ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ ಎಂದರು.
ಕಡೂರು ತಾಲೂಕಿಗೆ ಸಂಬಂಧಿಸಿದಂತೆ 260 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಮೇಘಾ ಇಂಜಿನಿಯರಿಂಗ್ ಸಂಸ್ಥೆಗೆ ವಹಿಸಲಾಗಿದ್ದು, ಇಲ್ಲಿಯವರೆಗೆ 120 ಕೋಟಿ ರೂ. ಮೌಲ್ಯದ ಕೆಲಸ ಪೂರ್ಣಗೊಂಡಿದೆ. 130 ಕೋಟಿ ರೂ. ವೆಚ್ಚದ ಕಾಮಗಾರಿ ಬಾಕಿ ಇದೆ. ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಕಾಯದೆ, 10 ಪಂಪ್ಹೌಸ್ಗಳ ನಿರ್ಮಾಣಕ್ಕೆ ಜಮೀನುಗಳನ್ನು ಈ ಭಾಗದ ರೈತರು ಬಿಟ್ಟುಕೊಟ್ಟ ಪರಿಣಾಮ ಕಾಮಗಾರಿ ವೇಗಪಡೆದುಕೊಂಡಿತು. ಶೀಘ್ರದಲ್ಲೇ ಪರಿಹಾರ ತಲುಪಲಿದೆ ಎಂದರು.
25 ಕಿ.ಮೀ ಪೈಪ್ಲೈನ್ನಲ್ಲಿ ಈಗಾಗಲೇ 18 ಕಿ.ಮೀ. ಪೂರ್ಣಗೊಂಡಿದ್ದು ಇನ್ನು 7 ಕಿ.ಮೀ. ಕಾಮಗಾರಿ ಬಾಕಿ ಇದೆ. ಜನವರಿ ವೇಳೆಗೆ ಇದನ್ನು ಪೂರ್ಣಗೊಳಿಸಿ ಕಡೂರು ತಾಲೂಕಿನ 28 ಕೆರೆಗಳಿಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಒಟ್ಟು 1,785 ಕಿ.ಮೀ. ಪೈಪ್ಲೈನ್ನಲ್ಲಿ ಈಗಾಗಲೇ 1,200 ಕಿ.ಮೀ. ಪೂರ್ಣಗೊಂಡಿದ್ದು ಉಳಿದ 600 ಕಿ.ಮೀ. ಕಾಮಗಾರಿಯನ್ನು ಮುಂದಿನ ವಷರ್ದ ಡಿಸೆಂಬರ್ ವೇಳೆಗೆ ಮುಗಿಸಲಾಗುವುದು. ಹಾಕಲಾಗಿರುವ ಪೈಪ್ಲೈನ್ಗಳು ಹಾನಿಯಾಗದಂತೆ ರೈತರು ಜಾಗರೂಕತೆಯಿಂದ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಅಂತರಘಟ್ಟೆ ಮತ್ತು ಕಲ್ಕೆರೆ ಕುಕ್ಕಸಮುದ್ರ ಕೆರೆಗೆ ಸ್ಥಳೀಯ ಗ್ರಾಮಸ್ಥರೊಂದಿಗೆ ಶಾಸಕರು ಬಾಗಿನ ಅರ್ಪಿಸಿದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂಧಿ ಕಲ್ಲೇಶ್, ಕೆಡಿಪಿ ಸದಸ್ಯ ಅಶೋಕ್, ವಿಶ್ವೇಶ್ವರಯ್ಯ ಜಲನಿಗಮದ ಎಇಇ ಸಿದ್ದೇಶ್, ಜಿಪಂ ಮಾಜಿ ಸದಸ್ಯೆ ಸರೋಜಮ್ಮ, ಗುತ್ತಿಗೆದಾರರ ಪ್ರತಿನಿಧಿ ಶ್ರೀಧರ್, ಸಂಕ್ಲಾಪುರ ಕಾಂತರಾಜ್, ಸವಿತಾ ಪಾಟೀಲ್, ಜೋಡಿತಿಮ್ಮಾಪುರ ಕೆ.ಟಿ.ನರಸಿಂಹಪ್ಪ, ಚಂದ್ರಪ್ಪ, ರೇವಣ್ಣ, ಲೋಕೇಶ್, ಅಂಜನಪ್ಪ, ಜಡೇಯಪ್ಪ, ಅರೇಹಳ್ಳಿ ರಾಜು, ಶಿವು, ಕರಿಯಪ್ಪ, ಸಣ್ಣ ನೀರಾವರಿ ಇಲಾಖೆಯ ಎಇಇ ದಕ್ಷಿಣಮೂರ್ತಿ ಮತ್ತಿತರರಿದ್ದರು.