ಕಡೂರು ತಾಲೂಕಿನ ಕಾಮನಕೆರೆ ಗ್ರಾಮದಲ್ಲಿ ಪಶು ಚಿಕಿತ್ಸಾಲಯವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಡಾ. ಗುರುಶಾಂತಪ್ಪ, ಪಂಚಾಕ್ಷರಿ, ಕಲ್ಲೇಶ್, ಡಾ.ಉಮೇಶ್, ಅಶೋಕ್ ಮತ್ತಿತರರಿದ್ದರು. 
ಚಿಕ್ಕಮಗಳೂರು

ಪಶು ವೈದ್ಯಕೀಯ ಸಿಬ್ಬಂದಿ ಹುದ್ದೆಗಳು ಖಾಲಿ Veterinary Clinic

Veterinary Clinic

ಕಡೂರು: ಅತಿ ಹೆಚ್ಚು ಜಾನುವಾರು ಸಂಪತ್ತು ಹೊಂದಿರುವ ಕಡೂರು ತಾಲೂಕಿನಲ್ಲಿ ಸುಮಾರು 80,000 ದೊಡ್ಡ ಜಾನುವಾರುಗಳು (ಹಸು ಮತ್ತು ಎಮ್ಮೆಗಳು), 1 ಲಕ್ಷಕ್ಕೂ ಅಧಿಕ ಕುರಿ ಹಾಗೂ ಮೇಕೆಗಳು ಮತ್ತು ಲಕ್ಷಾಂತರ ಕೋಳಿಗಳು ಇವೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಗುರುಶಾಂತಪ್ಪ ಹೇಳಿದರು.

ಕಾಮನಕೆರೆ ಗ್ರಾಮದಲ್ಲಿ ಗುರುವಾರ ಪಶು ಚಿಕಿತ್ಸಾಲಯ ಉದ್ಘಾಟನೆ ಹಾಗೂ ಗ್ರಾಮದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಾನುವಾರುಗಳ ಸೇವೆಗಾಗಿ ತಾಲೂಕಿನಲ್ಲಿ ಒಟ್ಟು 40 ವಿವಿಧ ಸಂಸ್ಥೆಗಳಿದ್ದು ಇವುಗಳಲ್ಲಿ 9 ಪಶು ಆಸ್ಪತ್ರೆಗಳು, 23 ಪಶು ಚಿಕಿತ್ಸಾಲಯಗಳು ಮತ್ತು 8 ಪ್ರಾಥಮಿಕ ಪಶು ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 159 ಹುದ್ದೆಗಳಲ್ಲಿ ಕೇವಲ 78 ಹುದ್ದೆಗಳು ಭರ್ತಿಯಾಗಿದ್ದು ಹಲವು ವೈದ್ಯರ ಹಾಗೂ ಪಶು ವೈದ್ಯಕೀಯ ಸಿಬ್ಬಂದಿ ಹುದ್ದೆಗಳು ಖಾಲಿ ಉಳಿದಿದೆ ಎಂದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಹೈನುಗಾರಿಕೆ ಬದುಕಿಗೆ ಹೆಚ್ಚು ಅವಲಂಬಿತವಾಗಿರುವ ತಾಲೂಕಿಗೆ ಜಿಲ್ಲಾ ಕೇಂದ್ರದ ಮೆಗಾ ಡೇರಿ ಸ್ಥಾಪನೆಗೆ ಎಲ್ಲ ರೀತಿಯ ಪ್ರಯತ್ನಗಳು ನಡೆಸಲಾಗುತ್ತಿದೆ. ಕಾಮನಕೆರೆ ಗ್ರಾಮದ ಬಹುದಿನಗಳ ಬೇಡಿಕೆಯಾಗಿದ್ದ ಪಶು ಆಸ್ಪತ್ರೆ ದ್ಘಾಟನೆಯಿಂದಾಗಿ ಸುತ್ತಮುತ್ತಲ ಗ್ರಾಮದ ರೈತರ ಜಾನುವಾರುಗಳನ್ನು ಬರಗಾಲದ ಪರಿಸ್ಥಿಯಲ್ಲಿ ಉಳಿಸಿಕೊಳ್ಳಲು ವರದಾನವಾಗಿದೆ ಎಂದರು.

ತಾಲೂಕಿನಲ್ಲಿ ಪ್ರತಿನಿತ್ಯ 1.10 ಲಕ್ಷ ಲೀಟರ್ ಹಾಲು ಸಂಗ್ರಹಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ನಿಗದಿಯಾಗಿರುವ ಪ್ರತ್ಯೇಕ ಮೆಗಾ ಡೇರಿ ನಿರ್ಮಾಣಕ್ಕೆ ಕಡೂರು-ಬೀರೂರು ನಡುವಿನ ಹಾಲಿನ ಘಟಕದಲ್ಲಿರುವ ಸೂಕ್ತ ಜಾಗವನ್ನು ಗುರುತಿಸಿ ಡೇರಿ ಕೇಂದ್ರವನ್ನು ಇಲ್ಲಿಯೇ ಸ್ಥಾಪಿಸಲು ಸರ್ಕಾರದ ಹಂತದಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಕಡೂರು ತಾಲೂಕಿಗೆ ಪಶು ಆಸ್ಪತ್ರೆ ಮಂಜೂರಾಗದೆ ಸುಮಾರು 20 ವರ್ಷಗಳೇ ಕಳೆದಿದ್ದವು. ಆದರೆ ಈಗ ಕಾಮನಕೆರೆ ಗ್ರಾಮಕ್ಕೆ ನೂತನ ಪಶು ಆಸ್ಪತ್ರೆ ಮಂಜೂರಾಗಿದ್ದು ಶೀಘ್ರದಲ್ಲೇ ಅಗತ್ಯ ವೈದ್ಯರು, ಸಿಬ್ಬಂದಿ ನಿಯೋಜಿಸಲಾಗುವುದು. ಗ್ರಾಮೀಣ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಜೂನ್ ವೇಳೆಗೆ ನಿಯಮಾನುಸಾರ ಕಾಮನಕೆರೆ ಹಾಗೂ ಸುತ್ತಮುತ್ತಲಿನ ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಪಂಚಾಕ್ಷರಿ ಮಾತನಾಡಿ, ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಶಾಸಕರು ಕಾಮಸಮುದ್ರಕ್ಕೆ ಪಶು ಆಸ್ಪತ್ರೆಯನ್ನು ಮಂಜೂರು ಮಾಡಿಸಿಕೊಟ್ಟಿದ್ದಾರೆ ಎಂದರು.

15 ಲಕ್ಷ ರೂ. ವೆಚ್ಚದ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಆಸಂದಿ ಕಲ್ಲೇಶ್, ಕೆಡಿಪಿ ಸದಸ್ಯ ಅಶೋಕ್, ತಾಲೂಕು ಸಹಾಯಕ ಪಶು ನಿರ್ದೇಶಕ ಡಾ. ಉಮೇಶ್, ಡಾ. ಯೋಗೀಶ್, ಡಾ. ಸಚ್ಚಿನ್, ಗ್ರಾಪಂ ಆಡಳಿತಾಧಿಕಾರಿ ಗಿರಿಧರ್, ಪಿಡಿಒ ತನುಜಾ, ಗ್ರಾಮದ ಮುಖಂಡರಾದ ಶಿವರುದ್ರಪ್ಪ, ಶೇಖರಪ್ಪ, ಸುಧಾ, ಆನಂದಪ್ಪ, ಗೋವಿಂದಪ್ಪ, ಪ್ರಸನ್ನ, ಮಹೇಶ್ ಮತ್ತಿತರರಿದ್ದರು.