ಮೂಡಿಗೆರೆ: ಜಲಜೀವನ್ ಕಾಮಗಾರಿ, ವಿದ್ಯುತ್ ಸಂಪರ್ಕ, ರಸ್ತೆ ದುರಸ್ತಿ ಹಾಗೂ ಆರೋಗ್ಯ ಸೇವೆಯಲ್ಲಿ ದೋಷಗಳ ಕುರಿತು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ವಿವಿಧ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕಿ ನಯನಾ ಮೋಟಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಕಲ್ಪಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಪಂನಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಮಸ್ಯೆ ಆಲಿಸಿ ಮಾತನಾಡಿದರು. ಕೆಡಿಪಿ ಸದಸ್ಯ ಸಂಪತ್ಕುಮಾರ್ ಮಾತನಾಡಿ, ಬಿಳಗುಳ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗಾಗಿ ಚರಂಡಿ ಅಗೆದು ಬಿಟ್ಟಿದ್ದಾರೆ. 5 ಕಡೆ ಕಾಮಗಾರಿ ಅಪೂರ್ಣವಾಗಿವೆ. ಸುಭಾಷ್ ನಗರದಲ್ಲಿ ಕಾಮಗಾರಿ ಪೂರ್ಣಗೊಂಡು 5 ವರ್ಷ ಕಳೆದಿದ್ದರೂ ಇದುವರೆಗೆ ನೀರು ಪೂರೈಕೆಯಾಗುತ್ತಿಲ್ಲ. ನಿರ್ಮಿಸಿರುವ ಬಾವಿಯಲ್ಲಿ ನೀರಿಲ್ಲ. ತಾಲೂಕಿನಾದ್ಯಂತ ಇಂಥ ಸಮಸ್ಯೆಗಳು ವ್ಯಾಪಕವಾಗಿವೆ. ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಗೀತಾಂಜಲಿ, ತಾಲೂಕಿನ 97 ಕಡೆ ಜೆಜೆಎಂ ಕಾಮಗಾರಿ ಅರ್ಧಕ್ಕೆ ನಿಂತಿದೆ. 40 ಕಾಮಗಾರಿ ಪೂರ್ಣಗೊಂಡಿದೆ. ಎಲ್ಲ ಕಾಮಗಾರಿಗೂ ಟ್ರಾನ್ಸ್ಫಾರ್ಮರ್ ಅಳವಡಿಸಬೇಕಾಗಿದೆ. ಕೇಂದ್ರದಿಂದ ಶೇ.60 ಮಾತ್ರ ಅನುದಾನ ಬಿಡುಗಡೆಯಾಗಿದೆ. ಉಳಿದ 40 ಇನ್ನಷ್ಟು ಬಿಡುಗಡೆಯಾಗಬೇಕು. ಹಾಗಾಗಿ ಗುತ್ತಿಗೆದಾರರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಮಾ.25ಕ್ಕೆ ಕಾಮಗಾರಿ ಪೂರ್ಣಗೊಳಿಸಲು ಡೆಡ್ಲೈನ್ ಇತ್ತು ಎಂದು ತಿಳಿಸಿದರು.
ಕೆಡಿಪಿ ಸದಸ್ಯ ಸುರೇಂದ್ರ ಮಾತನಾಡಿ, ದೇವರಾಜ ಅರಸು ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮದಿಂದ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ ಒಂದು ವರ್ಷ ಕಳೆದಿದ್ದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಅಧಿಕಾರಿಗಳು ಮೀನಮೇಷ ಎಣಿಸುತ್ತಾರೆ. ಕೊಳವೆಬಾವಿಗಳು ನಿಷ್ಕ್ರಿಯವಾಗುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಶಾಸಕಿ ನಯನಾ ಮೋಟಮ್ಮ ಪ್ರತಿಕ್ರಿಯಿಸಿ, ವಿವಿಧ ನಿಗಮಗಳಿಂದ ಕೊರೆಸಿರುವ ಕೊಳವೆಬಾವಿಗೆ ಕೂಡಲೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಸೂಚಿಸಿದರು.
ನಾನು 50 ಕಡೆ ಹೈಮಾಸ್ಟ್ ದೀಪ ಅಳವಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಆದರೆ ಪಟ್ಟಣದ ಹೊಯ್ಸಳ ಕ್ರೀಡಾಂಗಣಕ್ಕೆ ಹೈಮಾಸ್ಟ್ ದೀಪ ಅಳವಡಿಸಲು ಸೂಚಿಸಿ 3 ವರ್ಷ ಕಳೆದಿದೆ. ಇದುವರೆಗೆ ಅಳವಡಿಸದಿರುವುದಕ್ಕೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನ.26ರೊಳಗೆ ಹೈಮಾಸ್ಟ್ ದೀಪ ಅಳವಡಿಸುವಂತೆ ತಾಕೀತು ಮಾಡಿದರು.
ಕಳಸದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸಲು 3 ಕೋಟಿ ರೂ. ಮಂಜೂರಾಗಿದೆ. ಅಲ್ಲಿ ಗುರುತಿಸಿರುವ ಜಾಗದ ಮಣ್ಣು ತೆರವುಗೊಳಿಸಲು 1 ಕೋಟಿ ರೂ. ಅನುದಾನ ಬೇಕಾಗಿದೆ. ಬೇರೆ ಕಡೆ ಜಾಗ ಗುರುತಿಸಿ ಠಾಣೆ ನಿರ್ಮಿಸಲಾಗುವುದು ಎಂದು ಅಗ್ನಿಶಾಮಕ ದಳದ ಅಧಿಕಾರಿ ಸುನಿಲ್ ಮಾಳ ಸಭೆಗೆ ತಿಳಿಸಿದಾಗ, ಈಗ ಗುರುತಿಸಿರುವ ಜಾಗದಲ್ಲಿ ಹಾಸ್ಟೆಲ್ ನಿರ್ಮಿಸುವಂತೆ ಅಧಿಕಾರಿಗಳಿಗೆ ನಯನಾ ಮೋಟಮ್ಮ ಸೂಚಿಸಿದರು.
ಕಾರ್ಮಿಕ ಇಲಾಖೆ ಅಧಿಕಾರಿ ಕೆ.ಎಚ್.ಜೀವನ್ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಹೊರಗಿನ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಅವರ ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ ಎಂದು ತಿಳಿಸಿದರು. ಇದಕ್ಕೆ ದನಿಗೂಡಿಸಿದ ಶಿಕ್ಷಣ ಇಲಾಖೆಯ ಹೇಮಂತ್ ಚಂದ್ರ, ಹೊರರಾಜ್ಯದ ಮತ್ತು ಹೊರ ಜಿಲ್ಲೆಯ ಮಕ್ಕಳನ್ನು ಅವರ ಪಾಲಕರು ಶಾಲೆಗೆ ಸೇರಿಸಿದರೆ ಆ ಮಕ್ಕಳಿಗೆ ಸರ್ಕಾರದ ಸವಲತ್ತುಗಳನ್ನು ನೀಡಿ ಶಿಕ್ಷಣ ನೀಡಲು ಸಿದ್ಧ ಎಂದು ತಿಳಿಸಿದರು.
ಮೂರು ತಿಂಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಕಳಸ ತಾಲೂಕಿನ ಅಡಕೂಡು ಸರ್ಕಾರಿ ಶಾಲೆ ಆವರಣದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ತುಂಡಾಗುವ ಸ್ಥಿತಿಯಲ್ಲಿದ್ದ ಕಾರಣ ಅದನ್ನು ಬದಲಾಯಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಲೈನ್ ಬದಲಾಯಿಸಿಲ್ಲ. ಎರಡು ದಿನದ ಹಿಂದೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಅದೃಷ್ಟವಶಾತ್ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಇಲ್ಲದಿದ್ದರಿಂದ ದುರಂತ ತಪ್ಪಿತು ಎಂದು ಕೆಡಿಪಿ ಸದಸ್ಯ ಗೋಪಾಲ ತಿಳಿಸಿದರು. ಶಾಸಕಿ ನಯನಾ ಮೋಟಮ್ಮ ಮಾತನಾಡಿ, ತಂತಿ ಬದಲಾಯಿಸುವಂತೆ ಹಿಂದಿನ ಕೆಡಿಪಿ ಸಭೆಯಲ್ಲಿ ಸೂಚಿಸಿದ್ದರೂ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ವಿದ್ಯುತ್ ತಂತಿ ತುಂಡಾಗಿ ಪ್ರಾಣಹಾನಿ ಸಂಭವಿಸಿದ್ದರೆ ಯಾರು ಹೊಣೆ ಹೊರುತ್ತಿದ್ದರು? ನಿಮಗೆ ನಾಚಿಕೆಯಾಗಬೇಕು. ಕೂಡಲೆ ತಂತಿ ಬದಲಾಯಿಸಿ ಎಂದು ಮೆಸ್ಕಾಂ ಎಇಇ ರಾಘವೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು.
ಮೂಡಿಗೆರೆ ತಾಪಂ ಆಡಳಿತಾಧಿಕಾರಿ ರವಿ ಪ್ರಸಾದ್, ಇಒ ಗಿರೀಶ್, ಕಳಸ ತಾಪಂ ಆಡಳಿತಾಧಿಕಾರಿ ಆನಂದ್, ಇಒ ಸುದೀಪ್, ಮೂಡಿಗೆರೆ ತಹಸೀಲ್ದಾರ್ ಎಸ್.ಅಶ್ವಿನಿ, ಕಳಸ ತಹಸೀಲ್ದಾರ್ ಮಂಜುನಾಥ್, ಗೋಪಾಲ, ಅಬ್ದುಲ್ ಸುಕೂರ್, ಕುನ್ನಳ್ಳಿ ರವಿ, ಸಂಪತ್ಕುಮಾರ್, ಸುರೇಂದ್ರ, ಲ್ಯಾರನ್ ಡಿಸೋಜಾ, ಪ್ರವಿಣ್ಕುಮಾರ್ ಇತರರಿದ್ದರು.
ಬೆಟ್ಟಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲಿಗೆ ಬಣಕಲ್ ಆರೋಗ್ಯ ಕೇಂದ್ರದಿಂದ ವೈದ್ಯರನ್ನು ನಿಯೋಜಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಶ್ವತ್ಥ್ಬಾಬು ಸಭೆಗೆ ತಿಳಿಸಿದರು. ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಬಣಕಲ್ ಆರೋಗ್ಯ ಕೇಂದ್ರದಿಂದ ವೈದ್ಯಾಧಿಕಾರಿ ನಿಯೋಜನೆ ಬೇಡ. ಬೇರೆ ಕಡೆಯಿಂದ ವೈದ್ಯಾಧಿಕಾರಿಯನ್ನು ನಿಯೋಜಿಸುವಂತೆ ಸೂಚಿಸಿದರು. ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪ್ರಿಯಾಂಕಾ ಮಾತನಾಡಿ, ತಾಲೂಕು ಸರ್ಕಾರಿ ಆಸ್ಪತ್ರೆಗೆ ಕಡೂರಿನಿಂದ ಅರಿವಳಿಕೆ ವೈದ್ಯರು ವಾರದಲ್ಲಿ 3 ದಿನ ಬರುತ್ತಿದ್ದರು. ಸೆಪ್ಟೆಂಬರ್ನಿಂದ ಹಾಜರಾಗಿಲ್ಲ. ಅರಿವಳಿಕೆ ವೈದ್ಯರಿಲ್ಲದೆ ಶಸ್ತ್ರಚಿಕಿತ್ಸೆ, ಹೆರಿಗೆ ಮಾಡಿಸಲು ತೊಂದರೆಯಾಗಿದೆ. ಗರ್ಭಿಣಿಯರು, ಇತರ ರೋಗಿಗಳನ್ನು ಬೇರೆ ಕಡೆ ಆಸ್ಪತ್ರೆಗೆ ಕಳಿಸಬೇಕಾಗಿದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಕೇಂದ್ರವಿದ್ದರೂ ವೈದ್ಯರಿಲ್ಲದ ಕಾರಣ ರೋಗಿಗಳು ಬೇರೆ ಕಡೆ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತಾಗಿದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ, ಜಿಲ್ಲಾ ಆರೋಗ್ಯಾಧಿಕಾರಿಯೊಂದಿಗೆ ಮಾತನಾಡಿ ವೈದ್ಯರ ಕೊರತೆ ಹಾಗೂ ಅರಿವಳಿಕೆ ತಜ್ಞರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.