ಕಡೂರು: ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಯ ನಾಲ್ಕನೇ ಹಂತದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲಾಗಿದೆ. ಸುಮಾರು 32 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಒತ್ತಾಯಿಸಲಾಗಿದೆ. ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಭರವಸೆ ನೀಡಿದರು.
ನಿಡುವಳ್ಳಿ ಗ್ರಾಮದ ಶ್ರೀ ಕರಿಯಮ್ಮ ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿ, ಬೀರೂರಿನ ದೇವನ ಕೆರೆಯಿಂದ ಸೋಮನಹಳ್ಳಿ ಮಲ್ಲಾಘಟ್ಟ ಕೆರೆಗೆ ನೀರು ಹರಿಸಿ, ಅಲ್ಲಿ 0.22ಟಿ.ಎಂ.ಸಿ ನೀರು ಸಂಗ್ರಹಿಸಿ ನಂತರ ಸಿಂಗಟಗೆರೆ, ಚಟ್ನಹಳ್ಳಿ, ಕೆ.ಬಿದರೆ, ಅಣೆಗೆರೆ, ಪಂಚನಹಳ್ಳಿ, ನಿಡುವಳ್ಳಿ, ಗಂಗನಹಳ್ಳಿ, ಗರುಗದಹಳ್ಳಿ ಸೇರಿದಂತೆ ಎಲ್ಲ ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.
ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ ನಿರ್ಮಾಣ ಅಥವಾ ಬೀದಿ ದೀಪ ಅಳವಡಿಸುವುದು ಮಾತ್ರವಲ್ಲ, ಸಾರ್ವಜನಿಕರ ವೈಯಕ್ತಿಕ ಹಾಗೂ ಇಲಾಖಾವಾರು ಜಟಿಲ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವುದು ಒಳಗೊಂಡಿದೆ ಎಂದು ತಿಳಿಸಿದರು.
ಕಡೂರು ಕ್ಷೇತ್ರದಲ್ಲಿ ಒಂದು ವರ್ಷದಿಂದಲೇ ಶಾಸಕರ ನಡೆ ಪಂಚಾಯಿತಿ ಕಡೆ ಕಾರ್ಯಕ್ರಮದ ಮೂಲಕ 26 ಗ್ರಾಪಂಗಳಲ್ಲಿ 30ಕ್ಕೂ ಹೆಚ್ಚು ಇಲಾಖೆಗಳ ಅಧಿಕಾರಿಗಳೊಂದಿಗೆ ತೆರಳಿ ಸಾರ್ವಜನಿಕ ಕುಂದುಕೊರತೆ ಆಲಿಸಿ ಬಗೆಹರಿಸಲಾಗಿದೆ ಎಂದರು.
ಪಂಚನಹಳ್ಳಿ ಹೋಬಳಿಯಲ್ಲಿ ವೈದ್ಯರ ಕೊರತೆ ನೀಗಿಸುವುದು, ಕ್ರೀಡಾಂಗಣದ ವಿದ್ಯುತ್ ಕಂಬಗಳ ತೆರವು, ಬಹು ವರ್ಷಗಳ ಬೇಡಿಕೆಯಾಗಿದ್ದ ಬಸವದೇವರ ರಸ್ತೆ ತೆರವು ಹಾಗೂ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಪಂಚನಹಳ್ಳಿಯಿಂದ ನಿಡುವಳ್ಳಿ-ತಾಂಡಾಕ್ಕೆ ರಸ್ತೆ ನಿರ್ಮಾಣದಂಥ ಪ್ರಮುಖ ಕೆಲಸಗಳನ್ನು ಸಾರ್ವಜನಿಕರ ಸಂಪರ್ಕ ಸಭೆಗಳ ಮೂಲಕ ಈಡೇರಿಸಲಾಗಿದೆ ಎಂದು ಹೇಳಿದರು.
ವೃದ್ಧರ ಖಾತೆಗೆ ಬರುತ್ತಿದ್ದ ಪಿಂಚಣಿಯನ್ನು ಅಧಿಕಾರಿಗಳು ತಡೆಹಿಡಿದಿರುವ ಕ್ರಮದ ಬಗ್ಗೆ ಪ್ರಶ್ನಿಸಿ ಕೂಡಲೇ ಮಂಜೂರು ಮಾಡಿಕೊಡುವಂತೆ ಅರ್ಜಿದಾರರು ಸಭೆಯಲ್ಲಿ ಒತ್ತಾಯಿಸಿದರು. ಈ ಬಗ್ಗೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ, ತಾಲೂಕಿನಲ್ಲಿ ತಡೆ ಹಿಡಿದಿರುವ ಪಿಂಚಣಿ ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅರ್ಹರ ಖಾತೆಗೆ ಪಿಂಚಣಿ ಮೊತ್ತ ದೊರಕಿಸಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಮೂಲಸೌಕರ್ಯ, ಖಾತೆ ಬದಲಾವಣೆ, ವಿದ್ಯುತ್ ಸಮಸ್ಯೆ ಸೇರಿದಂತೆ 130ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಇಂದಿರಾ ಕ್ಯಾಂಟೀನ್ ಯೋಜನೆಯ ಮೇಲ್ವಿಚಾರಣೆ ಸಮಿತಿ ಅಧ್ಯಕ್ಷ ಪಂಚನಹಳ್ಳಿ ಪ್ರಸನ್ನ, ತಾಪಂ ಇಒ ಸಿ.ಆರ್.ಪ್ರವೀಣ್, ಡಿಎಫ್‌ಒ ಬೋರಯ್ಯ, ಇಂಜಿನಿಯರ್ ಚಿದಾನಂದ್, ಅಧಿಕಾರಿಗಳಾದ ಯೋಗಾನಂದ್, ಜಿ.ಎಸ್.ಗೌಡ, ಮಂಜುನಾಥ್ ಇತರರಿದ್ದರು.