ತರೀಕೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮಧ್ಯ ನಿರ್ಮಿಸುತ್ತಿರುವ 20 ಮೀಟರ್ ಸುತ್ತಳತೆಯ ವೃತ್ತ. 
ಚಿಕ್ಕಮಗಳೂರು

ತರೀಕೆರೆ ವಿಸ್ತಾರ ವೃತ್ತದಿಂದಲೇ ತೊಂದರೆ Trouble starts Tarikere Circle

ಬಿ. ಉಮೇಶ್‌ನಾಯ್ಕ ತರೀಕೆರೆ

ಹತ್ತಾರು ವಸಂತಗಳಿಂದ ಹದಗೆಟ್ಟ ರಸ್ತೆಯಲ್ಲೇ ಸಂಚರಿಸಿ ಒಂದಿಲ್ಲೊಂದು ತೊಂದರೆ ಅನುಭವಿಸುತ್ತಿದ್ದ ಪಟ್ಟಣದ ಜನತೆಗೆ ರಸ್ತೆ ದ್ವಿಪಥವಾಗಿ ಪರಿರ್ವತನೆಗೊಂಡು ಅಗಲೀಕರಣವಾಗುತ್ತಿರುವುದು ಕೊಂಚ ಸಮಾಧಾನ ಮೂಡಿಸಿದೆ. ಆದರೆ ಕಳಪೆ ಕಾಮಗಾರಿ ಮತ್ತು ದೊಡ್ಡ ವೃತ್ತವೇ ಮತ್ತೊಂದು ರೀತಿಯಲ್ಲಿ ತೊಂದರೆ ಉಂಟುಮಾಡುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ಅಲ್ಲಲ್ಲಿ ತೇಪೆ ಹಾಕಿದಂತೆ ಕಂಡುಬರುತ್ತಿರುವ 6.95 ಕಿ.ಮೀ ಉದ್ದದ ಕಾಂಕ್ರೀಟ್ ಮತ್ತು ಡಾಂಬರೀಕೃತ ರಸ್ತೆ ಬಾಳಿಕೆ ಕುರಿತು ಅನುಮಾನ ವ್ಯಕ್ತವಾಗಿದೆ. ಇನ್ನು ರೈಲ್ವೆ ಸ್ಟೇಷನ್, ಪ್ರವಾಸಿ ಮಂದಿರ, ತಾಲೂಕು ಪಂಚಾಯಿತಿ ಕಚೇರಿ, ಬಯಲು ರಂಗ ಮಂದಿರ ಆವರಣ, ಕೋರ್ಟ್, ಸರ್ಕಾರಿ ಆಸ್ಪತ್ರೆ, ಸ್ಟೇಟ್ ಬ್ಯಾಂಕ್‌ಗೆ ಸಂಪರ್ಕಿಸುವ ಬೆಂಗಳೂರು-ಶಿವಮೊಗ್ಗ ಮಾರ್ಗ ಮಧ್ಯೆ ನಿರ್ಮಿಸುತ್ತಿರುವ ದೊಡ್ಡದಾದ ಎಂಜಿ ವೃತ್ತದಿಂದ ಸಮಸ್ಯೆ ಉಂಟಾಗುತ್ತಿದೆ.

ಲೋಕೋಪಯೋಗಿ ಇಲಾಖೆ ಪ್ರಾಮ್ಸಿ ಯೋಜನೆಯಡಿ ಸರ್ಕಾರ ಬಿಡುಗಡೆಗೊಳಿಸಿದ 4 ಕೋಟಿ ರೂ. ಅನುದಾನದಲ್ಲಿ ಕರ್ಬ್, ಡ್ರೈನ್, ಡೆಸ್ಕ್ ಸ್ಲಾೃಬ್, ಕಲ್ವರ್ಟ್, 250 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ, ಇಂಟರ್‌ಲಾಕ್, ಗ್ರಿಲ್ ಅಳವಡಿಕೆ, ಹೈಮಾಸ್ಟ್ ಲೈಟ್ ಇತರ ಸೌಲಭ್ಯ ಒಳಗೊಂಡಂತೆ ನಿರ್ಮಿಸುತ್ತಿರುವ ವೃತ್ತ ಪಟ್ಟಣದ ಸೌಂದರ್ಯಕ್ಕೆ ಕಳೆತಂದರೂ ಸಣ್ಣ ರಸ್ತೆ ನಡುವೆ 20 ಮೀಟರ್ ಸುತ್ತಳತೆಯ ವಿಸ್ತಾರ ವೃತ್ತ ನಿರ್ಮಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ.

20 ಮೀಟರ್ ಸುತ್ತಳತೆಯ ವೃತ್ತದ ಅಕ್ಕಪಕ್ಕ ಅಭಿವೃದ್ಧಿಪಡಿಸಿರುವ ಕಾಂಕ್ರೀಟ್ ಚರಂಡಿ ಮೇಲೆಯೇ ಸ್ಲ್ಯಾಬ್ ಅಳವಡಿಸಿ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಾವಣಗೆರೆ, ಹುಬ್ಬಳಿ, ಬೆಳಗಾಂ ಕಡೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಳಿಸಲಾಗಿದ್ದು, ಒಂದು ವೇಳೆ ಈ ಮಾರ್ಗದಲ್ಲಿ ಸಾಗುವ ಭಾರಿ ವಾಹನಗಳ ಸಂಚಾರದಿಂದ ಚರಂಡಿ ಮೇಲಿನ ಸ್ಲ್ಯಾಬ್ ಕುಸಿದರೆ ಅಥವಾ ತಿರುವಿನಿಂದ ಕೂಡಿರುವ ವೃತ್ತ ಸುತ್ತ ವಾಹನ ಸವಾರರು ಎಚ್ಚರ ತಪ್ಪಿ ವಾಹನ ಚಲಾಯಿಸಿದರೆ ಅವಘಡ ಸಂಭವಿಸುವ ಸಾಧ್ಯತೆ ಇದೆ.

ಪಟ್ಟಣದ ಅಂದ ಚೆಂದ ಪರಿಕಲ್ಪನೆ ಒಂದೆಡೆಯಾದರೂ, ಪಾದಚಾರಿಗಳು, ವಾಹನ ಸವಾರರ ಸುರಕ್ಷೆ ಕಡೆ ಹೆಚ್ಚಿನ ಗಮನ ಹರಿಸಬೇಕಾದ ಪಿಡಬ್ಲುೃಡಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ವೃತ್ತವನ್ನು ಕಡಿಮೆ ಗಾತ್ರದಲ್ಲಿ ವಿನ್ಯಾಸಗೊಳಿಸಬೇಕು ಎಂಬ ಆಗ್ರಹ ಮತ್ತೆ ಕೇಳಿಬಂದಿದೆ.

ವಿಸ್ತಾರವಾದ ವೃತ್ತದ ಒಂದು ಬದಿ ಆಟೋ ನಿಲ್ದಾಣವಿದ್ದು, ಉಳಿದ ದಿಕ್ಕಿನಲ್ಲಿ ರೈಲ್ವೆ ನಿಲ್ದಾಣದ ದಾರಿ ಇದೆ. ಇಂಥ ವೃತ್ತದಲ್ಲಿ ಶಿವಮೊಗ್ಗ ಮತ್ತಿತರ ಕಡೆ ಹೋಗುವ ಕೆಎಸ್‌ಆರ್‌ಟಿಸಿ ಬಸ್, ಚಿತ್ರದುರ್ಗ, ಲಕ್ಕವಳ್ಳಿ, ದಾವಣಗೆರೆ ಇತರ ಕಡೆ ಸಂಚರಿಸುವ ಖಾಸಗಿ ಬಸ್‌ಗಳು, ಗ್ರಾಮೀಣ ಪ್ರದೇಶಗಳು ಸೇರಿ ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಮುಂತಾದ ಕಡೆ ನಿತ್ಯ ಸಾಗುವ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆಗೊಳಿಸಲಾಗುತ್ತಿದೆ. ಹಾಗಾಗಿ ಈ ಪ್ರದೇಶ ಸದಾ ಜನ ಜಂಗುಳಿಯಿಂದ ಕೂಡಿರಲಿದ್ದು, ಸುಲಭ ಸಂಚಾರ ಅಸಾಧ್ಯವಾಗಿದೆ. ಪಾದಚಾರಿಗಳ ಜತೆ ಬೈಕ್, ಆಟೋ, ಬಸ್ ಚಾಲಕರು ವೃತ್ತ ದಾಟಿ ಬೇರೆ ದಾರಿ ಹಿಡಿಯಲು ಹರಸಾಹಸಪಡುವಂತಾಗಿದೆ.

4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಎಂ.ಜಿ ವೃತ್ತದ ಸುತ್ತ ಬ್ಯಾನರ್ ಹಾವಳಿ ಹೆಚ್ಚುತ್ತಿದೆ. ವಿವಿಧ ಕಾರ್ಯಕ್ರಮ, ಶುಭಕೋರುವ ಸಲುವಾಗಿ ನಿತ್ಯ ಅಳವಡಿಸುವ ಬ್ಯಾನರ್‌ಗಳು ವೃತ್ತ ಅಕ್ಕಪಕ್ಕದ ಜಾಗ ಆವರಿಸಿ ವಾಹನ ಸವಾರರ ದೃಷ್ಟಿ ಸೆಳೆಯುತ್ತಿವೆ. ಪಾದಚಾರಿಗಳು ಅಥವಾ ಸವಾರರು ಬ್ಯಾನರ್ ನೋಡುವ ಭರದಲ್ಲಿ ಸ್ವಲ್ಪ ದೃಷ್ಟಿ ಬದಲಾಯಿಸಿದರೂ ಅಪಘಾತವಾಗಲಿದೆ. ಬ್ಯಾನರ್‌ನಿಂದ ಆವೃತ್ತವಾಗಿರುವ ವೃತ್ತವೇ ಜನರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಲಿದೆ.

ಸುಮಾರು 56 ಕೋಟಿ ರೂ. ವೆಚ್ಚದಲ್ಲಿ ಹಳಿಯೂರು ಸಮೀಪದ ಭದ್ರಾ ಮೇಲ್ದಂಡೆ ನಾಲೆಯಿಂದ ಪಟ್ಟಣದ ಡಿವೈಎಸ್‌ಪಿ ಕಚೇರಿವರೆಗೆ 1.7 ಕಿ.ಮೀ ಸಿಮೆಂಟ್, 5.2 ಕಿ.ಮೀ ಡಾಂಬರ್ ಸೇರಿ ಒಟ್ಟು 6.95 ಕಿ.ಮೀ ಉದ್ದದ ರಸ್ತೆ ಅಗಲೀಕರಣಗೊಳಿಸಲಾಗುತ್ತಿದೆ. 4 ಗುತ್ತಿಗೆದಾರರು ನಿರ್ವಹಣೆ ಮಾಡಿದ ಕಾಂಕ್ರೀಟ್ ಮತ್ತು ಡಾಂಬರ್ ರಸ್ತೆ ನಿರ್ಮಾಣ ಹಂತದಲ್ಲೇ ಹದಗೆಟ್ಟಿದ್ದು, ದೀರ್ಘ ಕಾಲದ ಬಾಳಿಕೆ ಪ್ರಶ್ನಿಸುವಂತಿದೆ. ಜನ ಬರೀ ಕಾಲಿನಿಂದ ಕೆರೆದರೂ ಕಿತ್ತು ಬರುತ್ತಿರುವ, ಬಹುತೇಕ ತಗ್ಗು, ದಿಣ್ಣೆಯಂತಾದ ರಸ್ತೆಯಲ್ಲಿ ಜಿಗುಪ್ಸೆ ಪಡುತ್ತಲೇ ಓಡಾಡುವಂತಾಗಿದೆ.