ಶೃಂಗೇರಿ ಜೈನ ಮಂದಿರದಲ್ಲಿ ಆಯೋಜಿಸಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕೆ ಶ್ರಮಿಸಿದ ಡಾ. ನಿರಂಜನ್‌ಕುಮಾರ್ ಹಾಗೂ ಡಾ. ಭುವನೇಶ್ವರಿ ಬಲ್ಲಾಳ್ ದಂಪತಿಯನ್ನು ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಸನ್ಮಾನಿಸಿದರು. ನಿಷ್ಕಲಾ, ಕೀರ್ತಿಲತಾ ಇತರರಿದ್ದರು. 
ಚಿಕ್ಕಮಗಳೂರು

ಜೈನ ಮಂದಿರಗಳಿಂದ ಧರ್ಮದ ಉಳಿವು

The Survival of Religion Through Jain Temples

ಶೃಂಗೇರಿ: ಜೈನ ಧರ್ಮದ ಕುರಿತು ಜಾಗೃತಿ ಪರಿಮೂಡಿಸಲು ಋಷಿಮುನಿಗಳು, ರಾಜರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೊಂಬುಜ ಜೈನ ಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಜೈನಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಜಿನಾಲಯಗಳು ಧರ್ಮದ ಅಸ್ತಿತ್ವ ಉಳಿಸಲು ಇರುವ ಅನುಪಮ ಮಂದಿರಗಳು. ಇಪ್ಪತ್ತನಾಲ್ಕು ತೀರ್ಥಂಕರರು ಶಾಶ್ವತವಾದ ಸತ್ಯವನ್ನು ಜಗತ್ತಿಗೆ ನೀಡಿದ್ದಾರೆ. ಅವರು ನೀಡಿದ ಮಾರ್ಗದಲ್ಲಿ ನಾವೆಲ್ಲರೂ ನಡೆದಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದರು.

ಲೋಕದ ಪ್ರತಿ ಜೀವಿಯೂ ಅದರ ಸಾವನ್ನು ಬಯಸುವುದಿಲ್ಲ. ಪ್ರತಿಯೊಬ್ಬರೂ ಸಂಸಾರದಲ್ಲಿ ಬದುಕನ್ನು ಸಾಗಿಸಬೇಕು. ಸಮಾಜಕ್ಕೆ ನಾವು ನೀಡಿದ ದಾನದ ಪುಣ್ಯ ನಮಗೆ ಮಾತ್ರ ಲಭಿಸುತ್ತದೆ. ಕರ್ಮ ಬಂಧನದಲ್ಲಿ ನಾವು ಬಂಧಿಯಾದರೂ ಸತ್ಕಾರ್ಯಗಳನ್ನು ಪ್ರತಿನಿತ್ಯ ಮಾಡಿದ್ದರೆ ಮಾತ್ರ ಅದು ಭಗವಂತನನ್ನು ತಲುಪಲು ಸಾಧ್ಯ ಎಂದರು.

ಕರ್ಮವನ್ನು ಗೆಲ್ಲುವ ಮಾರ್ಗವನ್ನು ತೀರ್ಥಂಕರರು ನಮಗೆ ನೀಡಿದ್ದಾರೆ. ತನ್ನನ್ನು ತಾನು ಗೆದ್ದಾಗ ಮಾತ್ರ ಕರ್ಮದ ಮಾರ್ಗವನ್ನು ದಾಟಿ ಮೋಕ್ಷ ಮಾರ್ಗದತ್ತ ತೆರಳಲು ಸುಲಲಿತವಾಗುತ್ತದೆ. ತಪಸ್ಸು, ಧ್ಯಾನದಿಂದ ನಾವು ಇಂದ್ರಿಯಗಳನ್ನು ನಿಗ್ರಹಿಸಿಕೊಳ್ಳಬೇಕು. ಧರ್ಮದ ಮಾರ್ಗ ನಮಗೆ ಶಾಶ್ವತ ಸುಖ ನೀಡುತ್ತದೆ. ಅಹಿಂಸೆ ಜೈನ ಧರ್ಮದ ಮೂಲ ಉದ್ದೇಶ. ಎಲ್ಲ ಜೀವಿಗಳನ್ನು ನಾವು ಸಮಾನ ದೃಷ್ಟಿಯಿಂದ ನೋಡಬೇಕು. ಪ್ರಾಮಾಣಿಕವಾಗಿ ಭಗವಂತನನ್ನು ಪ್ರಾರ್ಥಿಸಬೇಕು ಎಂದರು.

ಜಿನಿವಾರ್ ರಾಜಶೇಖರಯ್ಯ ಸ್ಮರಣಾರ್ಥ ಅವರ ಮಗಳಾದ ಕೀರ್ತಿಲತಾ ಮಲ್ಲಿಪ್ರಸಾದ್ ಅವರು ಬಡವರಿಗೆ ಆರ್ಥಿಕ ಸಹಕಾರ ನೀಡಿದರು. ಜೈನ ಮಂದಿರದಲ್ಲಿ ನಡೆದ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಶ್ರಮಿಸಿದವರಿಗೆ ಹಾಗೂ ದಾನಿಗಳನ್ನು, ಸ್ವಾಮೀಜಿ ಅವರನ್ನು ಗೌರವಿಸಲಾಯಿತು.