ಎನ್.ಆರ್.ಪುರ: ಬಿಜೆಪಿ ಅಧಿಕಾರವನ್ನು ಪಡೆಯಲು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮುಖ್ಯಚುನಾವಣಾ ಆಯುಕ್ತ ಜ್ಞಾನೇಶ್ಕುಮಾರ್ ರಾಜೀನಾಮೆ ನೀಡಬೇಕು ಎಂದು ಭದ್ರಾಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಆಗ್ರಹಿಸಿದರು.
ಎಸ್ಐಆರ್ ವಿರುದ್ಧ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಬಿಜೆಪಿ ಎಲ್ಲ ಹಂತದ ಪ್ರಯೋಗ ಮಾಡಿ ಸಿಬಿಐ, ಐಟಿ, ಇಡಿ, ಇವಿಎಂಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಜನರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದು, ಕೇಂದ್ರ ಸರ್ಕಾರ ಚುನಾವಣಾ ಆಯುಕ್ತರನ್ನು ರಕ್ಷಣೆ ಮಾಡುತ್ತಿದೆ. ಕೊಪ್ಪದಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಫಾರ್ಮ್ 7 ಮೂಲಕ 243 ದಲಿತರು, ಶ್ರಮಿಕ ವರ್ಗದವರು, ಅಲ್ಪಸಂಖ್ಯಾತರ ಮತದಾನ ಹಕ್ಕಿನಿಂದ ವಂಚಿತರಾಗುವಂತೆ ಮಾಡಿದ ಅಕ್ರಮ ಸಾಬೀತಾಗಿದೆ ಎಂದರು.
2023ರ ಚುನಾವಣೆಯಲ್ಲಿ ಚುನಾವಣಾ ಆಯೋಗ, ಚುನಾವಣಾ ಅಧಿಕಾರಿಗಳನ್ನು ಬಳಸಿಕೊಂಡು ಮಾಜಿ ಶಾಸಕ ಮತ್ತು ಕೆಲವು ಮುಖಂಡರು ಅಂಚೆ ಮತಗಳನ್ನು ತಿದ್ದಿದ್ದರು. ಇದರ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಮತದಾರರಿಗೆ ಇರುವ ಹಕ್ಕನ್ನು ಎಸ್ಐಆರ್ ಮೂಲಕ ಕಿತ್ತುಕೊಳ್ಳುವ ಕೆಲಸ ಮಾಡುತ್ತಿರುವುದು ಸಂವಿಧಾನ ವಿರೋಧಿ. ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ಫಾರ್ಮ್ ನಂ 7 ನೀಡುವ ಮೂಲಕ ಪರಿಷ್ಕರಣೆ ಮಾಡುತ್ತಿರುವುದು ಅವರ ಭವಿಷ್ಯಕ್ಕೆ ಮಾರಕವಾಗಲಿದೆ ಎಂದರು.
ಕೆಪಿಸಿಸಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ, ಇ.ಸಿ.ಜೋಯಿ, ಗೇರುಬೈಲು ನಟರಾಜ್, ಎಸ್.ಡಿ.ರಾಜೇಂದ್ರ, ಸಾಜು, ಪ್ರಶಾಂತ್ ಶೆಟ್ಟಿ, ಮನು, ಬೆನ್ನಿ, ಸುನಿಲ್ಕುಮಾರ್, ಉಪೇಂದ್ರ, ಸೈಯದ್ ವಸೀಂ, ಎಚ್.ಎಂ.ಶಿವಣ್ಣ, ದೇವಂತ್, ಅಶ್ವಲ್, ಅಭಿಲಾಷ್, ಜುಬೇದಾ, ಎಲ್ದೋಸ್, ರಮೇಶ್, ರವಿ, ನಂದೀಶ್, ಕ್ಸೇವಿಯಾರ್, ದೇವಂತ್ ಗೌಡ, ರತನ್ ಗೌಡ, ವಿಜಯ್ , ಜಾನ್ಸನ್ ಇತರರಿದ್ದರು.