ಬಾಳೆಹೊನ್ನೂರಿನ ರಂಭಾಪುರಿ ಪೀಠ ಸಮೀಪದ ಕುಂಬತ್ತಿ ಗ್ರಾಮದ ಪ್ರಗತಿಪರ ಕೃಷಿಕರಾದ ಸುಶೀಲಮ್ಮ ರಂಗಪ್ಪನಾಯ್ಕ ಅವರ ಕುಟುಂಬ ಗೋ ಪೂಜೆ ನೆರವೇರಿಸಿ ಗೋವುಗಳಿಗೆ ಗೋ ಗ್ರಾಸ ನೀಡಿದರು. 
ಚಿಕ್ಕಮಗಳೂರು

ಗೋಪೂಜೆ, ಬಲಿಪಾಡ್ಯಮಿ ಸಂಭ್ರಮ Diwali

Balipadyami

ಬಾಳೆಹೊನ್ನೂರು: ಹೋಬಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ರೈತರು ಸಂಭ್ರಮದಿಂದ ಬಲಿಪಾಡ್ಯಮಿ, ಗೋಪೂಜೆ ಆಚರಿಸಿದರು.

ಸೋಮವಾರ ಬೆಳಗ್ಗೆ ಗೋವುಗಳನ್ನು ಸ್ವಚ್ಛಗೊಳಿಸಿ, ಹೂ ಮಾಲೆ, ವಿವಿಧ ಲಗಳ ಮಾಲೆ ಮಾಡಿ ಹಾಕಿ ಮೈ ತುಂಬಾ ಹಂಡ ಹುಂಡದ ಬಣ್ಣದ ಚಿತ್ತಾರ ಬರೆದು ಸಿಂಗರಿಸಿ ಪೂಜಿಸಿದರು. ಅಡಿಕೆ ಕಾಯಿ, ಹಿಂಗಾರ, ಉಗಣೆಕಾಯಿ, ಪಚ್ಚೆತೆನೆ, ಏಲಕ್ಕಿ ಗೆರೆ, ಚೆಂಡು ಹೂವು, ಬಾಳೆಹಣ್ಣುಗಳಿಂದ ಮಾಡುವ ಮಾಲೆಯನ್ನು ಕಟ್ಟಿದ್ದು ವಿಶೇಷವಾಗಿತ್ತು. ಕೊಟ್ಟಿಗೆಗಳನ್ನು ತಳಿರು ತೋರಣ, ಹೂ ಮಾಲೆಗಳಿಂದ ಅಲಂಕರಿಸಿದ್ದರು.

ಪೂಜೆ ನಂತರ ಗೋವುಗಳಿಗೆ ದೋಸೆ, ಬಾಳೆಹಣ್ಣು, ಅಕ್ಕಿ, ಬೆಲ್ಲ ಸೇರಿದಂತೆ ವಿವಿಧ ಆಹಾರಗಳನ್ನು ನೀಡಿ ಪಟಾಕಿ ಸಿಡಿಸಿ ಕೊಟ್ಟಿಗೆಯಿಂದ ಮೇಯಲು ಹೊರ ಕಳುಹಿಸಿದರು. ಸಂಜೆ ಮನೆಗೆ ವಾಪಸ್ ಬಂದ ಗೋವುಗಳನ್ನು ಕೊಟ್ಟಿಗೆ ಬಾಗಿಲಿನಲ್ಲಿ ಒನಕೆಗಳನ್ನು ಅಡ್ಡ ಇಟ್ಟು, ಓಕುಳಿ ಮಾಡಿ ಒಳ ಬರಮಾಡಿಕೊಂಡರು.

ಬಲಿಪಾಡ್ಯಮಿ ದಿನ ಕೃಷಿಕರು ತಮ್ಮ ಮನೆಗಳಲ್ಲಿ ವರ್ಷವಿಡೀ ಉಪಯೋಗಿಸುವ ನೇಗಿಲು, ನೊಗ, ಕತ್ತಿ, ಹಾರೆ, ಅಕ್ಕಿ ಮಡಕೆ, ಸೇರು, ಮೊರ ಸೇರಿದಂತೆ ಕೃಷಿ ಉಪಕರಣಗಳನ್ನು ಸ್ವಚ್ಛಗೊಳಿಸಿ, ಅಲಂಕರಿಸಿ ಮೇಳಿಗೆ ದೇವರು (ಮಿಳ್ಳಿದೇವರು, ಮಿಳ್ಳೆ ದೇವ್ರ) ಎಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಪೂಜೆಗೆ ಮಲೆನಾಡಿನಲ್ಲಿ ದೊರೆಯುವ ಪಚ್ಚೆತೆನೆ, ಅಡಿಕೆ ಹಿಂಗಾರ, ಬಾಳೆಹಣ್ಣು, ಎಲೆ ಅಡಿಕೆ ಮುಂತಾದ ವಸ್ತುಗಳನ್ನು ಮಾಲೆ ಮಾಡಿ ಕಟ್ಟುವುದು ಹಾಗೂ ಜೇಡಿ, ಕೆಮ್ಮಣ್ಣಿನ ಪಟ್ಟೆ ತೆಗೆಯುವುದು, ವಿವಿಧ ಲಾಸಗಳನ್ನು ಇಡುವುದು ವಿಶೇಷ. ಅದಲ್ಲದೆ ಎಲ್ಲ ಕೃಷಿ ಉಪಕರಣಗಳಿಗೆ ಹಾಗೂ ಅಡಿಕೆ, ತೆಂಗಿನ ಮರ, ಮನೆಯ ಬಾಗಿಲು ಮುಂತಾದವುಗಳಿಗೆ ಜೇಡಿಮಣ್ಣು, ಕೆಮ್ಮಣ್ಣಿನ ಪಟ್ಟೆ ಬಳಿಯುವುದೂ ಸಹ ಈ ಹಬ್ಬದ ವಿಶೇಷ.