ಕಳಸ: ಎಂಟು ದಿನಗಳಿಂದ ಕಳಸದಲ್ಲಿ ಸಡಗರದಿಂದ ನಡೆಯುತ್ತಿದ್ದ ಶ್ರೀ ಕಲಶೇಶ್ವರ ಸ್ವಾಮಿಯ ಗಿರಿಜಾ ಕಲ್ಯಾಣೋತ್ಸವ ಮಂಗಳವಾರ ರಾತ್ರಿ ನಡೆದ ಐತಿಹಾಸಿಕ ಹರಿಹರ ಸಮಾಗಮದೊಂದಿಗೆ ಸಂಪನ್ನಗೊಂಡಿತು.
ಮಂಗಳವಾರ ಬೆಳಗ್ಗೆ ಮಹಾ ಸಂಪ್ರೋಕ್ಷಣೆ ಬಳಿಕ ಧಾತ್ರಿ ಹೋಮ ನೆರವೇರಿಸಲಾಯಿತು. ಬಿಂದು ಮಾಧವ ದೇವಸ್ಥಾನದಲ್ಲಿ ಪೂಜೆಗಳು ನಡೆದ ಬಳಿಕ ಶ್ರೀ ಕಲಶೇಶ್ವರ ಸ್ವಾಮಿಯನ್ನು ವಶಿಷ್ಠಾಶ್ರಮಕ್ಕೆ ಕರೆತರಲಾಯಿತು. ದೇವರ ಆಗಮನದ ಹಿನ್ನೆಲೆಯಲ್ಲಿ ಮಾರ್ಗದುದ್ದಕ್ಕೂ ಗ್ರಾಮಸ್ಥರು ತಳಿರು ತೋರಣಗಳಿಂದ ಸಿಂಗರಿಸಿ ಭಕ್ತಿಪೂರ್ವಕ ಸ್ವಾಗತ ಕೋರಿದರು. ಗ್ರಾಮಕ್ಕೆ ಆಗಮಿಸಿದ ದೇವರಿಗೆ ಭಕ್ತರು ಹಣ್ಣು-ಕಾಯಿ ಸಮರ್ಪಿಸಿ ಸೇವೆ ಸಲ್ಲಿಸಿದರು.
ವಶಿಷ್ಠ ತೀರ್ಥದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು. ಬಳಿಕ ರಾತ್ರಿ ಪಂಚವಾದ್ಯಗಳ ನಿನಾದ, ಛತ್ರಿ-ಚಾಮರಗಳ ವೈಭವದೊಂದಿಗೆ ದೇವರನ್ನು ಹೊತ್ತು ಗಣಪತಿಕಟ್ಟೆ ಪ್ರದೇಶಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು. ಈ ಸಂದರ್ಭದಲ್ಲಿ ಎದುರಾದ ತ್ರಿಪುರಾಸುರರನ್ನು ಸಂಹರಿಸುವ ಧಾರ್ಮಿಕ ಸನ್ನಿವೇಶ ಭಕ್ತರನ್ನು ಭಾವಪರವಶಗೊಳಿಸಿತು. ನಂತರ ಸಂಪ್ರದಾಯದಂತೆ ಕಟ್ಟೆ ಪೂಜೆ ನೆರವೇರಿಸಲಾಯಿತು. ಅಲ್ಲಿಂದ ವೆಂಕಟರಮಣ ದೇವಸ್ಥಾನದ ಬಳಿಗೆ ಆಗಮಿಸಿದ ಶ್ರೀ ಕಲಶೇಶ್ವರ ಸ್ವಾಮಿಗೆ ಶ್ರೀ ವೆಂಕಟರಮಣ ಸ್ವಾಮಿಯ ಭೇಟಿಯಾಯಿತು. ಈ ಅಪೂರ್ವ ಕ್ಷಣವೇ ಹರಿಹರ ಸಮಾಗಮವಾಗಿ ಕಂಗೊಳಿಸಿತು. ಭಕ್ತಿಯ ಸಂಕೇತವಾದ ಈ ಸಮಾಗಮವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಉಭಯ ದೇವರ ಸಮ್ಮಿಲನದ ಬಳಿಕ ಒಟ್ಟಾಗಿ ನಡೆದ ಉತ್ಸವವು ಧಾರ್ಮಿಕ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ನಂತರ ಕಲಶೇಶ್ವರ ದೇವರು ಗಿರಿಜಾಂಬ ದೇವಸ್ಥಾನಕ್ಕೆ ತೆರಳಿತು. ಅಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದ ಬಳಿಕ ಶ್ರೀ ಕಲಶೇಶ್ವರ ಸ್ವಾಮಿಯನ್ನು ಸ್ವಕ್ಷೇತ್ರಕ್ಕೆ ಕರೆತರಲಾಯಿತು. ದೇವರು ಕಲಶೇಶ್ವರ ದೇವಸ್ಥಾನಕ್ಕೆ ಒಕ್ಕಲು ಆಗುವುದರೊಂದಿಗೆ ಎಂಟು ದಿನಗಳ ಗಿರಿಜಾ ಕಲ್ಯಾಣೋತ್ಸವದ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.
ಮೆರವಣಿಗೆಯುದ್ದಕ್ಕೂ ಆಕಾಶದಲ್ಲಿ ಬಣ್ಣಬಣ್ಣದ ಚಿತ್ತಾರ ಮೂಡಿಸಿದ ಪಟಾಕಿಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ದಾರಿಯುದ್ದಕ್ಕೂ ನೂರಾರು ಭಕ್ತರು ಹರಕೆಗಳನ್ನು ಸಮರ್ಪಿಸಿದರು. ಪಂಚವಾದ್ಯಗಳ ಮೊಳಗು, ಭಕ್ತರ ಜಯಘೋಷ, ದೀಪಾಲಂಕಾರ ಹಾಗೂ ಧಾರ್ಮಿಕ ಸಂಪ್ರದಾಯಗಳ ಸೊಬಗು ಇಡೀ ಕಳಸವನ್ನು ಭಕ್ತಿಯ ಲೋಕದಲ್ಲಿ ತೇಲುವಂತೆ ಮಾಡಿತು.