ಎನ್.ಆರ್.ಪುರ: ಆಲ್ದಾರ, ಬೈರಾಪುರ ಗ್ರಾಮದ ಭದ್ರಾ ಹಿನ್ನೀರು ಪ್ರದೇಶದ ಗ್ರಾಮಗಳ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಸುನೀಲ್‌ಕುಮಾರ್ ಸ್ಥಳ ಪರಿಶೀಲನೆ ನಡೆಸಿದರು.
ಗುರುವಾರ ತಹಸೀಲ್ದಾರ್ ಮತ್ತು ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದ್ದರು. ಗ್ರಾಮಗಳ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪರಿಶೀಲಿಸಿ, ಅಂದಾಜು ಪಟ್ಟಿ ತಯಾರಿಸಿ ವರದಿ ಸಲ್ಲಿಸುವಂತೆ ಎಇಇಗೆ ತಹಸೀಲ್ದಾರ್ ಸೂಚಿಸಿದ್ದರು. ಶನಿವಾರ ಎಇಇ ಸುನೀಲ್‌ಕುಮಾರ್ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ನಂತರ ಶಾಶ್ವತ ಪರಿಹಾರಕ್ಕೆ ಏನು ಕ್ರಮಕೈಗೊಳ್ಳಬಹುದು ಎಂಬುದರ ಕುರಿತು ಪರಿಶೀಲಿಸಿದರು.
ಎಇಇ ಸುನೀಲ್‌ಕುಮಾರ್ ಮಾತನಾಡಿ, ಭದ್ರಾ ಹಿನ್ನೀರಿನಿಂದ ಗ್ರಾಮಗಳಿಗೆ ನೀರು ಪೂರೈಸಲು ಸುಮಾರು 8 ಕಿ.ಮೀ ದೂರ ಪೈಪ್‌ಲೈನ್ ಕಾಮಗಾರಿ ಮಾಡಬೇಕಾಗುತ್ತದೆ. ಅಲ್ಲದೆ ಭದ್ರಾ ಹಿನ್ನೀರಿನಿಂದ ನೀರನ್ನು ಎತ್ತಲು ಸರ್ಕಾರದಿಂದ ಅನುಮತಿ ಬೇಕಾಗುತ್ತದೆ. ಈ ಗ್ರಾಮಗಳಲ್ಲಿ 7ಕ್ಕೂ ಅಧಿಕ ಕೆರೆಗಳಿವೆ. ಇಲ್ಲಿ ಒಂದು ದೊಡ್ಡ ಕೆರೆಯಿದ್ದು, ಈ ಕೆರೆಗೆ ನೀರು ತುಂಬಿಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಬೇಸಿಗೆಯಲ್ಲಿ ಭದ್ರಾ ಹಿನ್ನೀರು ಇನ್ನೂ ಒಂದೂವರೆ ಕಿ.ಮೀನಷ್ಟು ದೂರಕ್ಕೆ ಹೋಗುತ್ತದೆ. ಇದರಿಂದ 8 ಕಿ.ಮೀ ಅಲ್ಲದೆ ಮತ್ತೆ ಒಂದೂವರೆ ಕಿ.ಮೀ ನಷ್ಟು ದೂರದ ಪೈಪ್‌ಲೈನ್ ಆಗಬೇಕಾಗುತ್ತದೆ. ಭದ್ರಾ ಹಿನ್ನೀರಿನಲ್ಲಿ ಜಾಕ್‌ವೆಲ್ ನಿರ್ಮಿಸಿ, ಮೋಟಾರ್ ಅಳವಡಿಸಿ, ಟಿಸಿ ಅಳವಡಿಸಿ ನೀರೆತ್ತಬೇಕಾಗುತ್ತದೆ. ಇದು ಬಹು ದೊಡ್ಡ ಯೋಜನೆಯಾಗಿದೆ. ಪರ್ಯಾಯ ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಬಹುಗ್ರಾಮ ಯೋಜನೆ ಪಟ್ಟಿಯಲ್ಲಿ ಈ ಗ್ರಾಮಗಳಿಲ್ಲ. ಅದಕ್ಕೂ ಕೂಡ ಬೆಂಗಳೂರಿನ ತಾಂತ್ರಿಕ ತಂಡದವರೊಂದಿಗೆ ಚರ್ಚಿಸಿ, ಬಹುಗ್ರಾಮ ಯೋಜನೆ ವ್ಯಾಪ್ತಿಗೊಳಪಡಿಸುವ ಪ್ರಯತ್ನ ಮಾಡಲಾಗುವುದು ಎಂಬ ಭರವಸೆ ದೊರೆತಿದೆ ಎಂದು ತಿಳಿಸಿದರು. ಗ್ರಾಮಸ್ಥರಾದ ಬಾಬು, ರಮೇಶ್, ಚೇತನ್, ಗಂಗಾಧರ, ರಾಘವೇಂದ್ರ, ಜೇಬಿ, ರಾಜು,ರವಿ, ಗುಂಡಾ ಇತರರಿದ್ದರು.