ಕಳಸದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜನಜಾಗೃತಿ ಸಂಗ್ರಾಮ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಜಗನ್ ಮಾತನಾಡಿದರು. ಮಂಜಪ್ಪಯ್ಯ, ಜ್ವಾಲನಯ್ಯ, ಸಂತೋಷ್, ಶೇಷಗಿರಿ, ಆಶಾಲತಾ ಜೈನ್, ಸುರೇಶ್ ಭಟ್, ವಕೀಲ ಅನಂತೇಶ್ ಇದ್ದರು. 
ಚಿಕ್ಕಮಗಳೂರು

ಕಾರ್ಮಿಕರ ಬದುಕು ಬೀದಿಗೆ ಬರುವ ಅಪಾಯ Western Ghats

Kasturirangan Report

ಕಳಸ: ಕಸ್ತೂರಿ ರಂಗನ್ ವರದಿ ಪಶ್ಚಿಮಘಟ್ಟದಲ್ಲಿ ಮೂಡಿಸಿರುವ ಗೊಂದಲ ಮತ್ತು ಆತಂಕಕ್ಕೆ ಆಯಾ ಭಾಗದ ಸಂಸದರೇ ಹೊಣೆ ಎಂದು ಜನಜಾಗೃತಿ ಸಂಗ್ರಾಮ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಜಗನ್ ಹೇಳಿದರು.

ಕಸ್ತೂರಿ ರಂಗನ್ ವರದಿ ಬಗ್ಗೆ ಜನಜಾಗೃತಿ ಸಂಗ್ರಾಮ ವೇದಿಕೆ ರಾಜ್ಯಮಟ್ಟದಲ್ಲಿ ನಡೆಸುವ ಹೋರಾಟದ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಕಸ್ತೂರಿ ರಂಗನ್ ವರದಿ ಬಗ್ಗೆ 11 ಬಾರಿ ಸಭೆ ನಡೆದರೂ ಇಲ್ಲಿನ ಸಂಸದರು ವಿರೋಧ ವ್ಯಕ್ತಪಡಿಸಿಲ್ಲ. ಇದರಿಂದ ವರದಿ ಅನುಷ್ಠಾನದ ಮಟ್ಟಕ್ಕೆ ತಲುಪಿದೆ. ಪಶ್ಚಿಮಘಟ್ಟದ ಜನರ ಮತ್ತು ಅವರ ಜೀವನದ ಬಗ್ಗೆ ಸಂಸದರು ಗಮನಹರಿಸದೆ ಇರುವುದು ವಿಷಾದನೀಯ ಎಂದು ಹೇಳಿದರು.

ಕಸ್ತೂರಿ ರಂಗನ್ ವರದಿಯಿಂದ ಮೂಲ ನಿವಾಸಿಗಳಿಗೆ, ಕಾರ್ಮಿಕರಿಗೆ ಆಗುವ ತೊಂದರೆ ಬಗ್ಗೆ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡುವ ಬಗ್ಗೆ ನಮ್ಮ ಸಂಘಟನೆ ಕೆಲಸ ಮಾಡುತ್ತಿದೆ. ಪಶ್ಚಿಮಘಟ್ಟದಲ್ಲಿ ಕೃಷಿ ನಂಬಿಕೊಂಡು ಬದುಕು ಕಟ್ಟಿಕೊಂಡ ಸಾವಿರಾರು ಸಣ್ಣ ಕುಟುಂಬಗಳು ಮತ್ತು ಕಾರ್ಮಿಕರ ಬದುಕು ಬೀದಿಗೆ ಬರುವ ಅಪಾಯ ಇದೆ. ಆದ್ದರಿಂದ ಈ ಪ್ರದೇಶದಲ್ಲಿ ವರದಿ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಕಸ್ತೂರಿ ರಂಗನ್ ವರದಿ ಜಾರಿಯಾದರೆ ಪಶ್ಚಿಮಘಟ್ಟದಲ್ಲಿ ಮೂಲ ಸೌಕರ್ಯ ಪಡೆಯುವುದು ಕೂಡ ಕಷ್ಟವಾಗಲಿದೆ. ಇದು ನಮ್ಮ ಅಳಿವು-ಉಳಿವಿನ ಪ್ರಶ್ನೆ ಕೂಡ ಆಗಿದ್ದು, ರೈತರು ಮತ್ತು ಕಾರ್ಮಿಕರನ್ನು ಒಳಗೊಂಡು ನವದೆಹಲಿಯ ಜಂತರ್ ಮಂತರ್‌ನಲ್ಲಿ ಹೋರಾಟ ಆರಂಭಿಸಲು ಯೋಜಿಸಲಾಗಿದೆ. ರೈತರ ಸಹಿ ಸಂಗ್ರಹ ಮಾಡಿ ಸುಪ್ರೀಂಕೋರ್ಟ್‌ನ ಗ್ರೀನ್ ಬೋರ್ಡ್‌ಗೆ ಪ್ರಮಾಣಪತ್ರ ಸಲ್ಲಿಸಲು ಕೂಡ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಮುಖಂಡರಾದ ಮಂಜಪ್ಪಯ್ಯ, ಜ್ವಾಲನಯ್ಯ, ಸಂತೋಷ್, ಶೇಷಗಿರಿ, ಆಶಾಲತಾ ಜೈನ್, ಸುರೇಶ್ ಭಟ್, ವಕೀಲ ಅನಂತೇಶ್ ಇದ್ದರು.