ಲಿಂಗದಹಳ್ಳಿ: ತಣಿಗೆಬೈಲು ಭದ್ರಾ ವನ್ಯಜೀವಿ ವಲಯದ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮೀತಿ ಮೀರಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಅಡಿಕೆ, ತೆಂಗು, ಬಾಳೆ, ಕಾಫಿ, ಕಾಳುಮೆಣಸು ಹಾಗೂ ಅಲ್ಪಕಾಲದ ಬೆಳೆಗಳಾದ ಭತ್ತ, ರಾಗಿ, ಆಲೂಗಡ್ಡೆ, ಬಟಾಣಿ, ಜೋಳ, ಶೇಂಗಾ ಮುಂತಾದ ಬೆಳೆಗಳನ್ನು ತಿಂದು, ತುಳಿದು ಹಾಕಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡುತ್ತಿವೆ. ಪ್ರತಿ ದಿನ ಗ್ರಾಮಗಳತ್ತ ಬರುತ್ತಿರುವ ಕಾಡಾನೆಗಳ ದಾಳಿಯಿಂದ ಗ್ರಾಮಸ್ಥರು ಜೀವಭಯದಿಂದ ಬದುಕುವಂತಾಗಿದೆ. ಹುಣಸೆಬೈಲು ಗ್ರಾಮದ ಗುಂಡಪ್ಪ ಎಂಬುವವರು ಮನೆಯ ಮುಂದೆ ಕಟ್ಟಿ ಹಾಕಿದ್ದ ಹಸುವೊಂದನ್ನು ಕಾಡಾನೆ ಸೊಂಡಿಲಿನಿಂದ ಎತ್ತಿ ನೆಲಕ್ಕೆ ಹಾಕಿರುವ ಕಾರಣ ಹಸುವಿನ ಸೊಂಟ ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿವೆ ಎಂದು ನಂದಿಬಟ್ಟಲು ಗ್ರಾಪಂ ಮಾಜಿ ಅಧ್ಯಕ್ಷ ಎನ್.ಪಿ.ಕೃಷ್ಣೇಗೌಡ ತಿಳಿಸಿದ್ದಾರೆ.
ಸಂಜೆ ಭದ್ರಾ ಅಭಯಾರಣ್ಯದಿಂದ ಹೊರ ಬರುವ ಕಾಡಾನೆಗಳು ತಣಿಗೆಬೈಲು, ಹುಣಸೆಬೈಲು, ಜೈಪುರ, ನಂದಿಬಟ್ಟಲು ಇತರ ಗ್ರಾಮಗಳ ಸುತ್ತಮುತ್ತ ಸಂಚರಿಸುತ್ತ ರೈತರ ಬೆಳೆಗಳನ್ನು ಹಾಳು ಮಾಡುವುದರ ಜತೆಗೆ ರೈತರು ಕೊಳವೆ ಬಾವಿಗಳಿಗೆ ಅಳವಡಿಸಿರುವ ಮೋಟಾರ್, ಕೇಬಲ್ ಪೈಪ್ಗಳನ್ನು ಕಿತ್ತು ಹಾಕುತ್ತಿರುವುದರಿಂದ ಬೆಳೆಗಳಿಗೆ ನೀರು ಹಾಯಿಸಲು ತೊಂದರೆಯಾಗಿದೆ. ಗ್ರಾಮಸ್ಥರು ಸಂಜೆ ನಂತರ ಮನೆಗಳಿಂದ ಹೊರಬರಲು ಹೆದರಿಕೊಳ್ಳುವಂತಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.