ಕಡೂರು ತಾಲೂಕು ಕಚೇರಿಯಲ್ಲಿ ಕಸಬಾ ಹೋಬಳಿ ಮಟ್ಟದ ಪ್ರಜಾಸೇವೆ ಕಾರ್ಯಕ್ರಮವನ್ನು ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಆಸಂಧಿ ಕಲ್ಲೇಶ್ ಉದ್ಘಾಟಿಸಿದರು. ಸಿ.ಎಸ್.ಪೂರ್ಣಿಮಾ, ಸಿ.ಆರ್.ಪ್ರವೀಣ್, ಡಾ. ಉಮೇಶ್, ಕೆ.ಪ್ರಕಾಶ್, ಕಲ್ಲಪ್ಪ, ನಟರಾಜ್,ದೇವರಾಜ್ ಇತರರಿದ್ದರು.  
ಚಿಕ್ಕಮಗಳೂರು

ಕಡೂರು ಕಸಬಾ ಹೋಬಳಿ ಜನರ ಸಮಸ್ಯೆ ಹಲವು

The people of Kadur Kasaba Hobli face many problems

ಕಡೂರು: ತಾಲೂಕು ಕಚೇರಿಯಲ್ಲಿ ಶನಿವಾರ ನಡೆದ ಕಸಬಾ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನದಲ್ಲಿ ಗ್ರಾಮಸ್ಥರು ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಹೇಳಿಕೊಂಡರು. ಹೆಬ್ಬೆಟ್ಟು ಗುರುತು ತಾಳೆಯಾಗದೆ ನಾಲ್ಕೈದು ತಿಂಗಳಿಂದ ಪಡಿತರ ಸಿಗುತ್ತಿಲ್ಲ ಎಂದು ವೃದ್ಧೆ ಅಳಲು ತೋಡಿಕೊಂಡರೆ, ನನ್ನ ಸ್ವಾಧೀನದಲ್ಲಿದ್ದ ಜಮೀನನ್ನು ಬೇರೆಯವರ ಹೆಸರಿಗೆ ಮಾಡಿಕೊಟ್ಟಿದ್ದಾರೆ ಎಂದು ರೈತನ ಅಳಲು ಸೇರಿದಂತೆ ಕೆಲ ಸಾರ್ವಜನಿಕರು ದೂರು ಹೇಳಿದರು.

ತಿಮ್ಲಾಪುರದ ಗಂಗಮ್ಮ ಅವರ ಹೆಬ್ಬೆಟ್ಟು ಗುರುತು ತಾಳೆಯಾಗದೆ ನಾಲ್ಕೈದು ತಿಂಗಳಿಂದ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್ ಪೂರ್ಣಿಮಾ, ಹೆಬ್ಬೆಟ್ಟು ಗುರುತು ಹೊಂದಿಕೆಯಾಗದಿದ್ದರೂ ಇತರ ದಾಖಲೆಗಳನ್ನು ಪರಿಶೀಲಿಸಿ ಪಡಿತರ ವಿತರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬೀರೂರಿನ ವಾಸಿ ಮೂರ್ತಪ್ಪ ಮಾತನಾಡಿ, ನನ್ನ ಸ್ವಾಧೀನಾನುಭವದಲ್ಲಿದ್ದ ಜಮೀನನ್ನು ಬೇರೆಯವರಿಗೆ ಹೆಸರಿಗೆ ಮಾಡಿಕೊಡಲಾಗಿದೆ. ಈ ಕುರಿತು ಹಲವು ಬಾರಿ ಅರ್ಜಿ ಸಲ್ಲಿಸಿದರೂ ನ್ಯಾಯ ಸಿಕ್ಕಿಲ್ಲ. ಅನ್ಯಾಯ ಮುಂದುವರಿದರೆ ತಾಲೂಕು ಕಚೇರಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಬಾಕಿ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜಾನಪದ ಯುವಕ ಸಂಘದ ಅಧ್ಯಕ್ಷ ಡಿ.ಆರ್.ಶ್ರೀನಿವಾಸ್ ಮಾತನಾಡಿ, ತಾಲೂಕಿನ ಐತಿಹಾಸಿಕ ಶಾಸನಗಳು ಹಾಗೂ ಕಲಾಕೃತಿಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಉದ್ದೇಶದಿಂದ ಜಾನಪದ ಯುವಸಿರಿ ಯುವಕ ಸಂಘಕ್ಕೆ ಐದು ಎಕರೆ ಜಮೀನು ನೀಡುವಂತೆ ಮನವಿ ಮಾಡಿದರು.

ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯ ಐತಿಹಾಸಿಕ ಶಾಸನಗಳು ಮತ್ತು ಸ್ಮಾರಕಗಳಿದ್ದು, ‘ನಮ್ಮ ಊರು ನಮ್ಮ ಬೇರು’ ಕಾರ್ಯಕ್ರಮದಡಿ ಹೋಬಳಿವಾರು ಮಾಹಿತಿ ಸಂಗ್ರಹಿಸಲಾಗಿದೆ. ಅವುಗಳ ಸಂರಕ್ಷಣೆಗೆ ಕಸಬಾ ಹೋಬಳಿಯಲ್ಲಿ ಸೂಕ್ತ ಜಾಗ ಗುರುತಿಸಿ, ಪ್ರಸ್ತಾವನೆ ಸಲ್ಲಿಸಿದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಪೂರ್ಣಿಮಾ ತಿಳಿಸಿದರು.

ಪಹಣಿ ತಿದ್ದುಪಡಿ, ಪಡಿತರ ವಿತರಣೆಯಲ್ಲಿನ ಸರ್ವರ್ ಸಮಸ್ಯೆ ಹಾಗೂ ಜಮೀನಿನ ಅಲಿನೇಷನ್ ಪ್ರಕ್ರಿಯೆಯಲ್ಲಿನ ತಾಂತ್ರಿಕ ತೊಂದರೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಲವು ಅರ್ಜಿಗಳು ಸಲ್ಲಿಕೆಯಾದವು. ವಿವಿಧ ಇಲಾಖೆಯ ಅಧಿಕಾರಿಗಳು ಯೋಜನೆಗಳ ಮಾಹಿತಿ ನೀಡಿದರು.

ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಆಸಂಧಿ ಕಲ್ಲೇಶ್, ಬಿಸಿಎಂ ದೇವರಾಜ್, ಸಿಡಿಪಿಒ ದೇವರಾಜ್, ಕಂದಾಯ ನಿರೀಕ್ಷಕ ರವಿಕುಮಾರ್, ನಟರಾಜ್, ಕಲ್ಲಪ್ಪ, ಕೆ.ಪ್ರಕಾಶ್, ಮಂಜುನಾಥ್, ರವಿ ಮತ್ತಿತರರಿದ್ದರು.