ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಯಿಂದ ಶಾಸಕ ಕೆ.ಎಸ್.ಆನಂದ್ ಮಾಹಿತಿ ಪಡೆದರು. ಡಾ. ಎಚ್.ಕೆ.ಮಂಜುನಾಥ್, ಡಾ. ವೀರಪ್ರಸಾದ್, ಮೋಹನ್‌ಕುಮಾರ್ ಮತ್ತಿತರರಿದ್ದರು. 
ಚಿಕ್ಕಮಗಳೂರು

ಕಡೂರು ಆಸ್ಪತ್ರೆಯಲ್ಲಿ ಆಡಳಿತ ಸುಧಾರಣೆ ಅಗತ್ಯ Administrative reforms

ಕಡೂರು: ತಾಲೂಕು ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಕೆ.ಮಂಜುನಾಥ್ ಜತೆ ಶಾಸಕ ಕೆ.ಎಸ್.ಆನಂದ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ ಹೆಚ್ಚಿನದಾಗಿ ಆಸ್ಪತ್ರೆ ಆಡಳಿತ ವ್ಯವಸ್ಥೆ ಸುಧಾರಣೆ ಕೈಗೊಳ್ಳಲು ಹೆಚ್ಚು ಗಮನ ನೀಡಬೇಕು ಎಂಬ ಮನವಿ ಕೇಳಿಬಂದವು.

ಆಸ್ಪತ್ರೆ ಹೊರರೋಗಿ ವಿಭಾಗ ಸೇರಿದಂತೆ ವಿವಿಧ ವಿಭಾಗಗಳನ್ನು ವೀಕ್ಷಿಸಿದ ಶಾಸಕ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಳರೋಗಿಗಳಿಂದ ಕುಂದುಕೊರತೆಗಳನ್ನು ಆಲಿಸಿದರು. ಬಳಿಕ ವಿಜಯವಾಣಿಯೊಂದಿಗೆ ಮಾತನಾಡಿ, ಆಸ್ಪತ್ರೆ ವ್ಯವಸ್ಥೆ ಸುಧಾರಿಸಲು ನಿರಂತರವಾಗಿ ಶ್ರಮಿಸುತ್ತಿದ್ದರೂ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಎರಡು ವರ್ಷಗಳ ಹಿಂದೆ ತಾಲೂಕು ಆಸ್ಪತ್ರೆ ಅತ್ಯುತ್ತಮ ಸೇವೆ ನೀಡುತ್ತಿತ್ತು. ಆದರೆ ಆರೋಗ್ಯ ಇಲಾಖೆಯಲ್ಲಿ ನಡೆದ ಕೌನ್ಸೆಲಿಂಗ್ ನಿಯಮಾವಳಿಗಳಿಂದ ಇಲ್ಲಿದ್ದ ವೈದ್ಯರು ವರ್ಗಾವಣೆಯಾಗಿ ಹೋದರು. ಆದರೆ ಹೊಸ ವೈದ್ಯರು ಬರಲೇ ಇಲ್ಲ. ಇದರಿಂದಾಗಿ ಸಾರ್ವಜನಿಕ ಆಸ್ಪತ್ರೆಗೆ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿ ಸೂಕ್ತ ವೈದ್ಯಕೀಯ ಸೇವೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರ್ಥೋಪೆಡಿಕ್ ವೈದ್ಯರು 6 ತಿಂಗಳಿನಿಂದ ರಜೆಯಲ್ಲಿದ್ದು, ರೋಗಿಗಳಿಗೆ ಸಮಸ್ಯೆ ಉಂಟಾಗಿದೆ. ಇಎನ್‌ಟಿ ವೈದ್ಯರಿದ್ದರೂ ಯಾವುದೇ ಶಸ ಚಿಕಿತ್ಸೆ ನಡೆಯದೆ ನೆಪಮಾತ್ರಕ್ಕೆ ಕರ್ತವ್ಯ ನಿರ್ವಹಿಸುವಂತಾಗಿದೆ. ಇಬ್ಬರು ಹೆರಿಗೆ ವೈದ್ಯರು ಇರಬೇಕಿದ್ದು, ಒಬ್ಬರು ರಜೆಯಲ್ಲಿದ್ದಾರೆ. ಇದರಿಂದಾಗಿ ತಿಂಗಳಿಗೆ 180ಕ್ಕೂ ಹೆಚ್ಚು ನಡೆಯಬೇಕಿದ್ದ ಹೆರಿಗೆಗಳ ಸಂಖ್ಯೆ 40ಕ್ಕೆ ಇಳಿದಿದೆ. ಮಕ್ಕಳ ತಜ್ಞರ ಹುದ್ದೆಯೂ ಖಾಲಿ ಇದೆ. ವೈದ್ಯರ ಸಮಸ್ಯೆ ಕುರಿತು ಆರೋಗ್ಯ ಸಚಿವರ ಗಮನಕ್ಕೆ ತರಲಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಕೌನ್ಸೆಲಿಂಗ್ ನಿಯಮದಲ್ಲಿ ತಿದ್ದುಪಡಿ ತರುವುದಾಗಿ ಭರವಸೆ ನೀಡಿದ್ದು, ಅಲ್ಲಿಯವರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡದಿದ್ದರೆ, ಅಧಿವೇಶನದಲ್ಲಿ ಆರೋಗ್ಯ ಇಲಾಖೆಯ ಲೋಪದ ಬಗ್ಗೆ ಧ್ವನಿ ಎತ್ತಲಾಗುವುದು ಎಂದರು.

ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಸಮಯ ಪಾಲನೆ ಮಾಡಿ ರೋಗಿಗಳಿಗೆ ಅಗತ್ಯ ಸೇವೆ ಒದಗಿಸಿಕೊಡುವಂತೆ ಸೂಚನೆಗಳನ್ನು ನೀಡಲಾಗಿದೆ. ನೈರ್ಮಲ್ಯ ಹಾಗೂ ರೋಗಿಗಳಿಗೆ ನೀಡುವ ಊಟದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಆಡಳಿತಾಧಿಕಾರಿಗೆ ತಾಕೀತು ಮಾಡಿದರು.

ಕೆಲ ಕೆಳಹಂತದ ಸಿಬ್ಬಂದಿ, ನರ್ಸ್‌ಗಳು ಹಾಗೂ ಆಶಾ ಕಾರ್ಯಕರ್ತೆಯರು ಬ್ರೋಕರ್‌ಗಳಾಗಿ ಕಮಿಷನ್ ಹಣದ ಆಸೆಗೆ ಬಿದ್ದು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆಂಬ ದೂರುಗಳಿವೆ. ಇದರ ಕುರಿತು ಶೀಘ್ರದಲ್ಲೇ ಪ್ರತ್ಯೇಕ ಸಭೆ ನಡೆಸಲಾಗುವುದು. ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸುವ ಮತ್ತು ಅಕ್ರಮದಲ್ಲಿ ಭಾಗಿಯಾದ ಸಿಬ್ಬಂದಿ ವಿರುದ್ಧ ಎ್ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವೈದ್ಯರು, ದಾದಿಯರು, ಆಡಳಿತ ಇಲಾಖೆ ಸಿಬ್ಬಂದಿ ಜತೆ ಶಾಸಕ ಕೆ.ಎಸ್.ಆನಂದ್ ಸಭೆ ನಡೆಸಿ, ಆಸ್ಪತ್ರೆಗೆ ಆಗಬೇಕಾದ ತುರ್ತು ಅಗತ್ಯತೆಗಳ ಮಾಹಿತಿ ಪಡೆದರು. ಆಸ್ಪತ್ರೆ ವಸತಿಗೃಹದಲ್ಲಿ ನಿಯಮಬಾಹಿರವಾಗಿ ವಾಸ್ತವ್ಯ ಮಾಡುತ್ತಿರುವ ಸಿಬ್ಬಂದಿಯನ್ನು ವಾರದೊಳಗಾಗಿ ವಸತಿಗೃಹದಿಂದ ಖಾಲಿ ಮಾಡಿಸುವಂತೆ ಆಡಳಿತಾಧಿಕಾರಿಗೆ ಸೂಚಿಸಿದರು. ಕೆಲವರಿಂದ ಇಡೀ ಆಸ್ಪತ್ರೆಗೆ ಕೆಟ್ಟು ಹೆಸರು ಬರುತ್ತಿದೆ. ನಿಮ್ಮಿಂದ ಬಡ ರೋಗಿಗಳಿಗೆ ಅನುಕೂಲವಾಗಬೇಕೆ ಹೊರತು ತೊಂದರೆಯಾಗಬಾರದು ಎಂದು ಹೇಳಿದರು.

ಆಸ್ಪತ್ರೆ ಆಡಳಿತಾಧಿಕಾರಿಯಾಗಿ ಡಾ. ವೀರಪ್ರಸಾದ್ ಅವರಿಗೆ ಜವಾಬ್ದಾರಿ ವಹಿಸಿದರು. ವೈದ್ಯರಾದ ಕೆ.ಆರ್.ಮೋಹನ್‌ಕುಮಾರ್, ರೀಟಾ, ರಂಗನಾಥ್, ಡಿ.ಎಸ್.ರಾಕೇಶ್, ಪುರಸಭಾ ಮಾಜಿ ಉಪಾಧ್ಯಕ್ಷ ತೋಟದಮನೆ ಮೋಹನ್‌ಕುಮಾರ್, ಅಬಿದ್ ಪಾಷಾ, ಹರೀಶ್, ಸಚ್ಚಿನ್, ಅರೇಹಳ್ಳಿ ಶಿವು ಇದ್ದರು.