ಕಡೂರಿನಲ್ಲಿ ಶ್ರೀ ದುರ್ಗಾದೇವಿ ಮೆರವಣಿಗೆ ನಡೆಸಲಾಯಿತು. 
ಚಿಕ್ಕಮಗಳೂರು

ಕಡೂರಿನಲ್ಲಿ ಶ್ರೀ ದುರ್ಗಾದೇವಿ ವಿಸರ್ಜನೆ Immersion of Goddess Durga

ಕಡೂರು: ಪಟ್ಟಣದ ದೊಡ್ಡಪೇಟೆ ಛತ್ರದಬೀದಿಯಲ್ಲಿ ಶ್ರೀ ದುರ್ಗಾ ಸೇವಾ ಸಮಿತಿಯಿಂದ 10 ದಿನಗಳಿಂದ ಪ್ರತಿಷ್ಠಾಪಿಸಿದ್ದ ಶ್ರೀ ದುರ್ಗಾದೇವಿಯನ್ನು ಬುಧವಾರ ರಾತ್ರಿ ವೈಭವಯುತ ಮೆರವಣಿಗೆ ನಡೆಸಿ ಕೆ.ಹೊಸಳ್ಳಿ ಕಲ್ಯಾಣಿಯಲ್ಲಿ ಜಲಸ್ತಂಭನಗೊಳಿಸಲಾಯಿತು.

ಬೆಳಗ್ಗೆ ಧಾರ್ಮಿಕ ಪೂಜಾಕಾರ್ಯಗಳು ನೆರವೇರಿಸಿ ಅಲಂಕೃತ ಟ್ರಾೃಕ್ಟರ್‌ನಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನ ಛತ್ರದ ಬೀದಿಯಿಂದ ವಿಸರ್ಜನಾ ಮೆರವಣಿಗೆ ನಡೆಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ದೊಡ್ಡಪೇಟೆ, ಬಿ.ಎಚ್.ರಸ್ತೆ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಯು.ಬಿ.ರಸ್ತೆ, ಸಂಗೊಳ್ಳಿರಾಯಣ್ಣ ವೃತ್ತ, ಪುರಸಭೆ ರಸ್ತೆ, ಕದಂಬ ವೃತ್ತ, ಜೆಟಿ ರಸ್ತೆ, ಕೆ.ಎಂ.ರಸ್ತೆ, ಸುಭಾಷ್‌ನಗರ ಮಾರ್ಗವಾಗಿ ಕೆ.ಹೊಸಳ್ಳಿವರೆಗೆ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಡ್ರಂಸೆಟ್, ಚಂಡೆಮೇಳ, ಗೊಂಬೆಮೇಳ ವಿವಿಧ ಪ್ರಕಾರಗಳ ಕಲಾತಂಡಗಳು ಮೆರುಗು ನೀಡಿದವು.

ಮೆರವಣಿಗೆ ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಮಹಿಳೆಯರು ದೇವಿಗೆ ಆರತಿ ಎತ್ತಿ ಪೂಜೆ ಸಲ್ಲಿಸಿದರು. ಯುವಕರು ಮೆರವಣಿಗೆಯಲ್ಲಿ ಡಿಜೆ ಗೀತೆಗೆ ಕುಣಿದು ಸಂಭ್ರಮಿಸಿದರು. ಮೆರವಣಿಗೆಯಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಪ್ರಸಾದ ವಿತರಣೆ ಮಾಡಿದರು. ಬಿ.ಎಚ್.ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ಪಿಎಸ್‌ಐ ಸಜಿತ್‌ಕುಮಾರ್ ನೇತೃತ್ವದಲ್ಲಿ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು.

ಪಟ್ಟಣದ ಬಸವೇಶ್ವರ ವೃತ್ತದ ಚೆಕ್‌ಪೋಸ್ಟ್ ಬಳಿ ದೇವಿಯ ವಿಸರ್ಜನಾ ಮಹೋತ್ಸವದ ಮೆರವಣಿಗೆಯಲ್ಲಿ ಸಮಿತಿ ಪ್ರಥಮ ಬಾರಿಗೆ ವಾರಣಾಸಿಯ ಸತ್ಯತಿವಾರಿ ತಂಡದವರಿಂದ ದೇವಿಗೆ ದುರ್ಗಾರತಿ ನೆರವೇರಿಸಿದ್ದು ವಿಶೇಷವಾಗಿತ್ತು.

ಪಟ್ಟಣದ ಚೆಕ್‌ಪೋಸ್ಟ್ ಬಳಿ ದೇವಿಯ ಬೆಳ್ಳಿ ಬಾವುಟದ ಹರಾಜು ಪ್ರಕ್ರಿಯೆಯಲ್ಲಿ ಹೀರಾ ಹಾರ್ಡ್‌ವೇರ್ ಮಾಲೀಕ ರಾಕೇಶ್ ಕುಮಾರ್ ಅವರು 1.33 ಲಕ್ಷ ರೂ.ಗೆ ಹರಾಜು ಕೂಗುವ ಮೂಲಕ ಬಾವುಟವನ್ನು ತಮ್ಮದಾಗಿಸಿಕೊಂಡರು.

ವಿಸರ್ಜನಾ ಮಹೋತ್ಸವದಲ್ಲಿ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ದುರ್ಗಾ ಸೇವಾ ಸಮಿತಿ ಶ್ರೀ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ಧಾರ್ಮಿಕ ಸೇವೆ ಮಾಡಿದೆ. ತಾಲೂಕಿನಲ್ಲಿ ಆವರಿಸಿರುವ ಬರ ನೀಗಿಸುವಂತೆ ಪ್ರಾರ್ಥಿಸಲಾಗಿದೆ ಎಂದರು.

ಶ್ರೀ ದುರ್ಗಾ ಸೇವಾ ಸಮಿತಿ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಪದಾಧಿಕಾರಿಗಳಾದ ಭದ್ರಿಸ್ವಾಮಿ, ಅಡಿಕೆ ಚಂದ್ರು, ಕೆ.ಪಿ.ಶ್ರೀನಿವಾಸ್, ಸೋಮೇಶ್ ಶಿವಮೊಗ್ಗೆ, ಯತಿರಾಜ್, ಎಚ್.ಆರ್.ದೇವರಾಜ್, ಹಳೇಪೇಟೆ ರಂಗನಾಥ್, ವಿಕಾಸ್, ನಾಗೇಂದ್ರ, ಗೌತಮ್, ಆಕಾಶ್, ರಾಜು, ಶ್ರೇಯಸ್, ಚೇತನ್, ರಘು, ನಲ್ಲೂರಿ ಸುರೇಶ್, ಕೋಟೆ ಭರತ್, ನೂತನ್, ಗೋಪಿ ಇತರರಿದ್ದರು.