ಕಡೂರು: ತಾಲೂಕಿನಲ್ಲಿ ಏಪ್ರಿಲ್‌ನಿಂದ ಇಲ್ಲಿಯವರೆಗೆ 57 ಬೋರ್‌ವೆಲ್ ಕೊರೆಸಲು ಕ್ರಿಯಾಯೋಜನೆ ತಯಾರಿಸಲಾಗಿದ್ದು, 39 ಬೋರ್‌ವೆಲ್‌ಗಳು ಪೂರ್ಣಗೊಂಡಿವೆ. 24 ಬೋರ್‌ವೆಲ್‌ಗಳನ್ನು ರಿಡ್ರಿಲ್ಲಿಂಗ್ ಮಾಡಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ವಿಭಾಗದ ಎಇಇ ಶಿವಪ್ರಕಾಶ್ ತಿಳಿಸಿದರು.
ತಾಪಂನಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ನೀರಿನ ವ್ಯವಸ್ಥೆಗೆ ಕೈಗೊಂಡ ಕ್ರಮಗಳ ಮಾಹಿತಿ ನೀಡಿದರು. ತಾಪಂ ಇಒ ಸಿ.ಆರ್.ಪ್ರವೀಣ್ ಮಾತನಾಡಿ, ತಾಲೂಕಿನ 45 ಗ್ರಾಮಗಳಲ್ಲಿ ನೀರಿನ ಅಭಾವ ಎದುರಾಗಿದೆ. ಇದರಲ್ಲಿ 8 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ಗಳ ಮೂಲಕ ಮತ್ತು ಉಳಿದ ಗ್ರಾಮಗಳಿಗೆ ಟ್ಯಾಂಕರ್ ಹಾಗೂ ಪೈಪ್‌ಲೈನ್ ಮೂಲಕ ನೀರು ಪೂರೈಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿ ಮೂರ್ನಾಲ್ಕು ವರ್ಷವಾದರೂ ಪೂರ್ಣಗೊಂಡಿಲ್ಲ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ. ಈಗ ಬಾಡಿಗೆ ಕಟ್ಟಡಕ್ಕೆ ಪ್ರತಿ ತಿಂಗಳೂ 24 ಸಾವಿರ ರೂ. ಪಾವತಿಸಲಾಗುತ್ತಿದೆ. ಶೀಘ್ರ ಕಟ್ಟಡ ಕಾಮಗಾರಿ ಮುಗಿಸದಿದ್ದರೆ ಆ ಹಣವನ್ನು ಮರುಸಂಗ್ರಹಿಸಲು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ ಎಂದು ಎಇಇ ಶಿವಪ್ರಕಾಶ್ ಅವರಿಗೆ ಎಚ್ಚರಿಸಿದರು.
ತಾಲೂಕಿನಲ್ಲಿ ಬರ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು. ಬರ ಪರಿಹಾರ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಬೇರೆ ಊರುಗಳಿಂದ ಸಂಚರಿಸುವುದನ್ನು ಬಿಟ್ಟು ಸ್ಥಳೀಯವಾಗಿ ಲಭ್ಯವಿರಬೇಕು ಎಂದು ಶಾಸಕ ಸೂಚನೆ ನೀಡಿದರು.
ಕುಡಿಯುವ ನೀರಿನ ಅಭಾವ ನೀಗಿಸಬೇಕಿದೆ. ಪಿಡಿಒಗಳು ಹಾಗೂ ಇಂಜಿನಿಯರ್‌ಗಳು ಸ್ಥಳದಲ್ಲಿದ್ದು, ಕೆಲಸ ನಿರ್ವಹಿಸಬೇಕು. ಶಾಸಕರಿಗೆ ಬೋರ್‌ವೆಲ್ ಕೊರೆಸಲು ಮನವಿ ಮಾಡುವುದಷ್ಟೇ ಪರಿಹಾರವಲ್ಲ. ಲಭ್ಯವಿರುವ ನೀರನ್ನು ಸಮರ್ಥವಾಗಿ ನಿರ್ವಹಣೆ ಮಾಡುವುದು ಮುಖ್ಯ. ಗ್ರಾಮೀಣ ಭಾಗದಲ್ಲಿ ನೀರಿನ ಅಭಾವ ಇರುವುದರಿಂದ ಪ್ರತಿ ಮನೆಗೆ ನೇರವಾಗಿ ನಲ್ಲಿ ಸಂಪರ್ಕದ ಮೂಲಕ ನೀರು ಪೂರೈಸುವುದು ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ವಾಟರ್ ಮ್ಯಾನ್‌ಗಳು ಜವಾಬ್ದಾರಿಯಿಂದ ಕೆಲಸ ಮಾಡಲು ಸೂಚಿಸುವಂತೆ ತಾಪಂ ಇಒ ಅವರಿಗೆ ತಾಕೀತು ಮಾಡಿದರು.
ಕುಡಿಯುವ ನೀರಿನ ಯೋಜನೆಗಳು, ಬೋರ್‌ವೆಲ್ ಕೊರೆಯುವುದು ಹಾಗೂ ಪೈಪ್‌ಲೈನ್ ಕಾಮಗಾರಿಗಳಿಗಾಗಿ ಸರ್ಕಾರದ 1.80 ಕೋಟಿ ರೂ. ಗೂ ಹೆಚ್ಚು ಅನುದಾನ ಲಭ್ಯವಿದೆ. ಅನುದಾನವಿಲ್ಲ ಎಂಬ ನೆಪಹೇಳದೆ ನೀರಿನ ಅಭಾವವಿರುವ ಗ್ರಾಮಗಳಲ್ಲಿ ಪಾಯಿಂಟ್ ಮಾಡಿಸಿ ಹೊಸ ಬೋರ್‌ವೆಲ್ ಕೊರೆಸಬೇಕು ಎಂದು ನಿರ್ದೇಶನ ನೀಡಿದರು.
ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿರುವುದರಿಂದ ಬೀರೂರು, ದೇವನೂರು, ಸಿಂಗಟಗೆರೆ, ಯಗಟಿ, ಅಂತರಘಟ್ಟೆ, ಪಂಚನಹಳ್ಳಿ ಸೇರಿದಂತೆ ಒಂಬತ್ತು ಕಡೆ ಮೇವುಬ್ಯಾಂಕ್ ಮಾಡಲು ಹಾಗೂ ಮೂರು ಕಡೆ ಗೋಶಾಲೆ ತೆರೆಯಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಎಮ್ಮೆದೊಡ್ಡಿ ಪಶು ಆಸ್ಪತ್ರೆಯಲ್ಲಿದ್ದ ವೈದ್ಯರ ಸಮಸ್ಯೆ ಬಗೆಹರಿಸಲಾಗಿದೆ. ತಲಾ ಐದು ಕೆ.ಜಿ. ಬಿತ್ತನೆ ಬೀಜವಿರುವ 25 ಸಾವಿರ ಮೇವು ಕಿಟ್ ಬೇಡಿಕೆ ಸಲ್ಲಿಸಲಾಗಿತ್ತು. ಈಗ 3722 ಮೇವು ಕಿಟ್ ಬಂದಿದ್ದು, ಜಾನುವಾರುಗಳ ಸಂಖ್ಯೆ ಆಧಾರದ ಮೇಲೆ ರೈತರಿಗೆ ವಿತರಿಸಲಾಗಿದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಉಮೇಶ್ ಸಭೆಗೆ ತಿಳಿಸಿದರು.
ಅಣೇಗೆರೆ, ಎಸ್.ಮಾದಾಪುರ ಹಾಗೂ ಬೀರೂರು ಭಾಗದಲ್ಲಿ ನಮ್ಮ ಕ್ಲಿನಿಕ್ ತೆರೆಯಲು ಜಾಗದ ಸಮಸ್ಯೆ ಎದುರಾಗಿದ್ದು, ಅರಣ್ಯ ಇಲಾಖೆಯಡಿ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಉಮೇಶ್ ಸಭೆಯ ಗಮನಕ್ಕೆ ತಂದರು. ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಕಡೂರಿನ ಮುದಿಯಪ್ಪ ಬಡಾವಣೆ ಭಾಗಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಕೋಟೆ ಭಾಗಕ್ಕೆ ಸ್ಥಳಾಂತರಿಸಬೇಕಿದ್ದು, ಕೂಡಲೇ ಜಾಗ ಗುರುತಿಸಬೇಕು. ಕಡೂರು-ಬೀರೂರು ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣಗಳು ಗಣನೀಯವಾಗಿ ಇಳಿಕೆಯಾಗಿದೆ. ಕೆಲವು ಆಶಾ ಕಾರ್ಯಕರ್ತೆಯರು ಕಮಿಷನ್ ಆಸೆಗೆ ಬಿದ್ದು ಗರ್ಭಿಣಿಯರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸುತ್ತಿದ್ದಾರೆ. ಇಂಥ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಎಫ್‌ಐಆರ್ ದಾಖಲಿಸಿ ಎಂದು ವೈದ್ಯಾಧಿಕಾರಿಗೆ ನಿರ್ದೇಶನ ನೀಡಿದರು. ಜತೆಗೆ ಯಗಟಿ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಗೊಳಿಸಲು ಗಮನಹರಿಸುವಂತೆ ಕೃಷಿ ಅಧಿಕಾರಿಗೆ ತಿಳಿಸಿದರು.
ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಆಸಂಧಿ ಕಲ್ಲೇಶ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.