ಕಡೂರು ತಾಲೂಕಿನ ತಂಗಲಿ ಕೆರೆ ಬಳಿ ಭದ್ರಾ ಉಪಕಣಿವೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ಧನಪಾಲ್‌ನಾಯ್ಕ, ಹರ್ಷ, ರವಿ ಇತರರಿದ್ದರು.  
ಚಿಕ್ಕಮಗಳೂರು

ಎರಡನೇ ಹಂತದ ಕಾಮಗಾರಿ ಶೇ.75ರಷ್ಟು ಪೂರ್ಣ

75% of the second phase of work is complete

ಕಡೂರು: ಭದ್ರಾ ಉಪಕಣಿವೆ ಯೋಜನೆಯ ಮೊದಲ ಹಂತಕ್ಕೆ 464 ಕೋಟಿ ರೂ. ಹಾಗೂ ಎರಡನೇ ಹಂತಕ್ಕೆ 387 ಕೋಟಿ ರೂ. ವೆಚ್ಚ ಮಾಡಲಾಗಿದೆ. ಎರಡನೇ ಹಂತದ ಕಾಮಗಾರಿ ಶೇ.75ರಷ್ಟು ಪೂರ್ಣಗೊಂಡಿದ್ದು, ಬಾಣಾವರದವರೆಗೆ ಪೈಪ್‌ಲೈನ್ ಅಳವಡಿಕೆ ಹಾಗೂ ದೇವನಕೆರೆಯಿಂದ ಮದಗದಕೆರೆವರೆಗಿನ ಕಾಮಗಾರಿಗಳು ಪ್ರಗತಿಯಲ್ಲಿವೆ. ದೇವನಕೆರೆ ಪಂಪ್‌ಹೌಸ್ ನಿರ್ಮಾಣ ಪೂರ್ಣಗೊಂಡಿದ್ದು, ವಿದ್ಯುದೀಕರಣ ಬಾಕಿಯಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಎಇಇ ಹರ್ಷ ತಿಳಿಸಿದರು.

ತಂಗಲಿ ಕೆರೆ ಬಳಿ ಭದ್ರಾ ಉಪಕಣಿವೆ ಯೋಜನೆ ಮೂರನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೂರನೇ ಹಂತದಲ್ಲಿ 407 ಕೋಟಿ ರೂ. ವೆಚ್ಚದಲ್ಲಿ ತಂಗಲಿ ಕೆರೆಯಿಂದ ಬೆಳವಾಡಿವರೆಗೆ ಪೈಪ್‌ಲೈನ್ ಅಳವಡಿಸಿ, ಕಡೂರು ತಾಲೂಕಿನ 11 ಕೆರೆಗಳು ಸೇರಿದಂತೆ ಒಟ್ಟು 77 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಯಿಂದ ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.

ಮಲ್ಲಘಟ್ಟದಿಂದ ಸಿಂಗಟಗೆರೆ ಭಾಗದ 36 ಕೆರೆಗಳಿಗೆ ನೀರು ತುಂಬಿಸುವ ನಾಲ್ಕನೇ ಹಂತದ ಯೋಜನೆಗಾಗಿ 1,600 ಕೋಟಿ ರೂ. ಗೂ ಅಧಿಕ ಮೊತ್ತದ ಪರಿಷ್ಕೃತ ಡಿಪಿಆರ್ ಅನ್ನು ಮಂಡಳಿ ಸಭೆಯಲ್ಲಿ ಮಂಡಿಸಲಾಗಿದೆ. ಅನುಮೋದನೆ ದೊರೆತ ಬಳಿಕ ಮುಂದಿನ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಭದ್ರಾ ಉಪಕಣಿವೆ ಯೋಜನೆ ಮೂರನೇ ಹಂತದ ಕಾಮಗಾರಿಯಿಂದ ತಾಲೂಕಿನ 77 ಕೆರೆಗಳು ತುಂಬಲಿವೆ. ಭದ್ರಾ ಉಪಕಣಿವೆ ಯೋಜನೆಗೆ 1281 ಕೋಟಿ ರೂ. ವೆಚ್ಚದಲ್ಲಿ ಹಿಂದಿನ ಸರ್ಕಾರ ಅನುಮೋದನೆ ನೀಡಿತಾದರೂ ಒಂದು ರೂಪಾಯಿಯನ್ನೂ ಮೀಸಲಿಟ್ಟರಲಿಲ್ಲ ಎಂದು ದೂರಿದರು.

ನಾನು ಶಾಸಕನಾಗಿ ಆಯ್ಕೆಯಾದ ಸಮಯದಲ್ಲಿ ಈ ಯೋಜನೆ ಪ್ರಾರಂಭಿಕ ಹಂತದಲ್ಲಿತ್ತು. ನನ್ನ ನಿರಂತರ ಪರಿಶ್ರಮದ ಫಲಿತಾಂಶವಾಗಿ ಮೊದಲೆರಡು ಹಂತದ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿಸಿ ನಂತರ ಮೂರನೇ ಹಂತಕ್ಕೆ ನಬಾರ್ಡ್ ಮೂಲಕ 450 ಕೋಟಿ ಹಣ ಮಂಜೂರಾತಿ ಪಡೆಯಲಾಯಿತು ಎಂದರು.

ಮಲ್ಲಘಟ್ಟದಿಂದ ಸಿಂಗಟಗೆರೆ ಭಾಗದ 36 ಕೆರೆಗಳನ್ನು ತುಂಬಿಸಲು 1600 ಕೋಟಿ ವೆಚ್ಚದ ರಿವೈಸ್ಟ್ ಡಿಪಿಆರ್ ಅನ್ನು ಬೋರ್ಡ್ ಸಭೆಯಲ್ಲಿ ಮಂಡಿಸಲಾಗಿದ್ದು, ಶೀಘ್ರವೇ ಅನುಮೋದನೆ ದೊರೆತು ಕಾಮಗಾರಿ ಆರಂಭವಾಗಲಿದೆ ಎಂದರು.

ತಾಲೂಕಿನ ಬರ ನೀಗಿಸುವ ಆಸಕ್ತಿ, ಬದ್ಧತೆ ಹಿಂದಿನ ಶಾಸಕರಿಗೆ ಇದ್ದಿದ್ದರೆ ಕಡೂರು ಇಷ್ಟು ಬರದಲ್ಲಿ ಬೇಯುತ್ತಿರಲಿಲ್ಲ. ಅಧಿವೇಶನದಲ್ಲಿ ಒಮ್ಮೆಯಾದರೂ ಮಾತನಾಡದಿದ್ದವರು ಈಗ ಕೆರೆಗಳಿಗೆ ಬಾಗಿನ ಅರ್ಪಿಸುತ್ತಾರೆ. ಭದ್ರಾ ನೀರು ಪ್ರಾಯೋಗಿಕವಾಗಿ ಹರಿಸಿದಾಗ ವಿರೋಧಿಗಳು ಇದು ತಾತ್ಕಾಲಿಕ. ಟ್ರಯಲ್ ವಿಫಲವಾಗಿದೆ ಎಂದು ಹುಯಿಲೆಬ್ಬಿಸಿದರು. ಅವೆಲ್ಲ ಟೀಕೆಗಳಿಗೆ ಈಗ ಉತ್ತರ ದೊರೆತಿದೆ. ಮುಂದಿನ ಜೂನ್ ಒಳಗೆ ಎರಡನೇ ಹಂತದ ಕಾಮಗಾರಿ ಸಂಪೂರ್ಣಗೊಳಿಸುವ ಗುರಿ ನನ್ನದಾಗಿದೆ ಎಂದರು.

1.45 ಟಿಎಂಸಿ ನೀರು ಕಡೂರು ಕ್ಷೇತ್ರಕ್ಕೆ ಮಂಜೂರಾಗಿತ್ತು. ಆ ನೀರಿನಲ್ಲಿ ಅರ್ಧ ಭಾಗದಷ್ಟು ನೀರನ್ನು ಆಗ ಉಸ್ತುವಾರಿ ಸಚಿವರಾಗಿದ್ದ ಸಿ.ಟಿ.ರವಿ ಚಿಕ್ಕಮಗಳೂರಿಗೆ ಪಡೆದುಕೊಂಡಿದ್ದು ತಾಲೂಕಿಗೆ ಹಿನ್ನಡೆಯಾಗಿದೆ. ನಮ್ಮಿಂದ ಕಿತ್ತುಕೊಂಡ ನೀರನ್ನು ಮತ್ತೆ ಪಡೆಯುವ ಗುರಿ ನನ್ನದು. ಅದನ್ನು ಖಂಡಿತ ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಸತೀಶ್‌ನಾಯ್ಕ, ಪ್ರಕಾಶ್‌ನಾಯ್ಕ, ಕುಮಾರನಾಯ್ಕ, ಕರಿಬಡ್ಡೆ ಶ್ರೀವಾಸ್, ನಟರಾಜ್, ನಿಡಘಟ್ಟ ಸಂತೋಷ್, ಜಿಗಣೇಹಳ್ಳಿ ಲೋಕೇಶ್, ಯಗಟಿ ಗೋವಿಂದಪ್ಪ, ರಾಜಣ್ಣ, ಶ್ರೀಕಂಠ ಒಡೆಯತ್, ಯರದಕೆರೆ ಶಿವು, ರಾಜು ಸೇವಾಪುರ, ಗುತ್ತಿಗೆದಾರ ರವಿ, ನಿಗಮದ ಅಧಿಕಾರಿಗಳು ಇದ್ದರು.