ಮೂಡಿಗೆರೆ ತಾಲೂಕು ಬಾರದಹಳ್ಳಿ ತೋಟದಲ್ಲಿ ಕಾಡಾನೆಗಳು ಗಿಡಗಳನ್ನು ಧ್ವಂಸಗೊಳಿಸಿರುವುದು. 
ಚಿಕ್ಕಮಗಳೂರು

ಆಪರೇಷನ್ ಎಲಿಫೆಂಟ್ ತಾತ್ಕಾಲಿಕ ಸ್ಥಗಿತ

Operation Elephant Temporarily Halted

ಮೂಡಿಗೆರೆ: ಕಾಡಾನೆಗಳ ಸ್ಥಳಾಂತರ ಕಾರ್ಯಾಚರಣೆ ವಿರೋಧಿಸಿ ಬುಧವಾರ ಮೂಡಿಗೆರೆ ಬಂದ್ ಕರೆ ನೀಡಿದ್ದ ಹಿನ್ನೆಲೆಯಲ್ಲಿ ತತ್ಕೊಳ ಅರಣ್ಯಕ್ಕೆ ಕಾಡಾನೆಗಳ ಅಟ್ಟುವ ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಾಡಾನೆಗಳು ಚದುರಿ ಮೂರು ಗುಂಪುಗಳಾಗಿ ಬಂದ ದಾರಿಯಲ್ಲಿ ವಾಪಸ್ ಹೊರಟಿವೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ಹಿಂಬಾಲಿಸುತ್ತಿದ್ದಾರೆ.

ಕಾರ್ಯಾಚರಣೆಗೆ ಸಿಲುಕಿಕೊಂಡಿರುವ 35 ಕಾಡಾನೆಗಳು ಮೂರು ಗುಂಪುಗಳಾಗಿ ಬುಧವಾರ ಮೂಡಸಸಿ ಗ್ರಾಮದ ಪುಟ್ಟೇಗೌಡ ಅವರ ತೋಟದಲ್ಲಿ ಒಂದು ಗುಂಪು, ಕಾರಬೈಲ್ ಗ್ರಾಮದ ಮಂಜುನಾಥ್ ಗೌಡ, ವೀರೇಶ್ ಗೌಡ ಮತ್ತು ಶಿವಾನಂದ ಗೌಡ ಅವರ ಕಾಫಿ ತೋಟದಲ್ಲಿ ಇನ್ನೊಂದು ಗುಂಪು, ಪುರ ಗ್ರಾಮದಲ್ಲಿ ಮತ್ತೊಂದು ಗುಂಪುಗಳಾಗಿ ತಿರುಗಾಡುತ್ತಿವೆ.

ಅರಣ್ಯ ಇಲಾಖೆ ಸಿಬ್ಬಂದಿ 7 ಡ್ರೋನ್ ಥರ್ಮಲ್ ಕ್ಯಾಮರಾದಲ್ಲಿ ಕಾಡಾನೆಗಳ ಸಂಚಾರದ ಮೇಲೆ ನಿಗಾವಹಿಸಿದ್ದಾರೆ. ಭಾನುವಾರ ಮೂರು ಗುಂಪಾಗಿ ಚದುರಿದ್ದ ಕಾಡಾನೆಗಳನ್ನು ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ಎರಡು ಗುಂಪು ಮಾಡುವಲ್ಲಿ ಯಶಸ್ವಿಯಾಗಿದ್ದರು. ಮಂಗಳವಾರ ಒಂದೇ ಗುಂಪಿನಲ್ಲಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಘಟ್ಟದಹಳ್ಳಿವರೆಗೆ ಕರೆತಂದಿದ್ದರು. ಮಂಗಳವಾರ ರಾತ್ರಿ ಅಟ್ಟುವ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರಿಂದ ಕಾಡಾನೆಗಳು ಬಂದ ದಾರಿಯಲ್ಲಿ ವಾಪಸಾಗುತ್ತಿವೆ.

ಬೇಲೂರಿನತ್ತ ಕಾಡಾನೆಗಳು ಹಿಂದಿರುಗಲಿವೆ ಎಂದು ಹಾಸನದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬೇಲೂರು-ಮೂಡಿಗೆರೆ ಗಡಿಯಲ್ಲಿ ಜಮಾಯಿಸಿ ಡ್ರೋನ್ ಥರ್ಮಲ್ ಕ್ಯಾಮರಾ ಮೂಲಕ ಕಟ್ಟೆಚ್ಚರ ವಹಿಸಿದ್ದಾರೆ. ಸರ್ಕಾರದಿಂದ ತೀರ್ಮಾನವಾಗದೆ ಮೂಡಿಗೆರೆ ಗಡಿಯಿಂದ ಕಾಡಾನೆಗಳು ಬೇಲೂರು ತಾಲೂಕಿಗೆ ಪ್ರವೇಶಿಸಲು ಅಲ್ಲಿನ ಆಡಳಿತ ವ್ಯವಸ್ಥೆ ಬಿಡಲು ಸಾಧ್ಯವಿಲ್ಲ. ತತ್ಕೊಳ ಮೀಸಲು ಅರಣ್ಯಕ್ಕೆ ಅಟ್ಟುವುದನ್ನು ವಿರೋಧಿಸಿ ಮೂಡಿಗೆರೆ ತಾಲೂಕಿನಲ್ಲಿ ತೀವ್ರ ಜನಾಕ್ರೋಶ ಎದುರಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇದೊಂದು ಉಭಯಸಂಕಟವಾಗಿದೆ. ಕಾಡಾನೆಗಳು ಎತ್ತ ಹೋಗುವುದೆಂದು ದಿಕ್ಕು ತೋಚದೆ ಅತ್ತಿತ್ತ ಓಡಾಡುತ್ತ ಕಾಫಿ ತೋಟಗಳನ್ನು ನಾಶಪಡಿಸುತ್ತಿವೆ. ಸರ್ಕಾರ ನ.30ರಂದು ಸಭೆ ನಡೆಸಲಿದೆ. ಅಲ್ಲಿ ತೀರ್ಮಾನವಾಗುವವರೆಗೂ ಕಾಡಾನೆಗಳಿಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಹಾಗೂ ಮೂಡಿಗೆರೆ ತಾಲೂಕಿನ ಜನರಿಗೂ ನೆಮ್ಮದಿ ಇಲ್ಲದಂತಾಗಿದೆ.