ತರೀಕೆರೆ: ಜನತಾ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ಗಂಭೀರ ಸ್ವರೂಪವಲ್ಲದ ಸಿವಿಲ್, ಕ್ರಿಮಿನಲ್ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ವಕೀಲ ಬಿ.ಪಿ.ವಿಕಾಸ್ ತಿಳಿಸಿದರು.
ಬೇಲೇನಹಳ್ಳಿ ಗ್ರಾಪಂನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ಕಾನೂನಿನಿಂದ ಯಾರೂ ವಂಚಿತರಾಗಬಾರದೆಂದು, ಅಶಕ್ತರು, ದೌರ್ಜನ್ಯಕ್ಕೊಳಗಾದವರಿಗೆ ಉಚಿತ ಕಾನೂನು ಸೇವೆ ಜತೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಲೋಕ ಅದಾಲತ್ನಲ್ಲಿ ಸಿವಿಲ್, ಮೋಟಾರ್ ಅಪಘಾತ ಇತರ ಪ್ರಕರಣ ರಾಜಿ ಸಂಧಾನ ಮಾಡಿಕೊಳ್ಳುವುದರಿಂದ ಅನಗತ್ಯ ಖರ್ಚು, ಸಮಯ ಉಳಿತಾಯವಾಗಲಿದೆ. ನ್ಯಾಯಾಂಗ ವ್ಯವಸ್ಥೆ ಅಶಕ್ತರಿಗಾಗಿ ಉಚಿತ ಕಾನೂನು ನೆರವು ನೀಡುತ್ತಿದ್ದು, ಯಾವುದೇ ಲಿಂಗ, ವರ್ಣಭೇದ ಇಲ್ಲದೆ ರೂಪಿಸಿರುವ ಉಚಿತ ಕಾನೂನು ಸೇವೆಯನ್ನು ಆರ್ಥಿಕವಾಗಿ ಹಿಂದುಳಿದ ಪ್ರತಿಯೊಬ್ಬರೂ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ವಕೀಲ ಟಿ.ಸಿ.ಅಮರ್ನಾಥ್ ಮಾತನಾಡಿ, ಯಾವುದೇ ಪ್ರಕರಣಗಳಲ್ಲಿ ಕಾನೂನು ಜ್ಞಾನವಿಲ್ಲದೆ ಮಾಡಿದ ಅಪರಾಧಗಳಿಗೆ ಕ್ಷಮೆ ಇಲ್ಲ. ಸಾಮಾನ್ಯ ಜ್ಞಾನವೇ ಕಾನೂನಾಗಿದ್ದು, ಪ್ರತಿಯೊಬ್ಬರೂ ಕಾನೂನು ತಿಳಿದು ಅಜ್ಞಾನದಿಂದ ದೂರ ಉಳಿಯಬೇಕು. ಸಮಾಜದಲ್ಲಿನ ಬಲಹೀನರಿಗೆ ಉಚಿತ ಕಾನೂನು ನೆರವು ನೀಡುವುದು ಮಾತ್ರವಲ್ಲ, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜನ ಸಾಮಾನ್ಯರಲ್ಲಿರುವ ಭಯ ಹೋಗಲಾಡಿಸುವ ಮುಖ್ಯ ಧ್ಯೇಯ ಪ್ರಾಧಿಕಾರ ಹೊಂದಿದೆ ಎಂದರು.
ವಕೀಲ ಕೆ.ಲೋಹಿತ್ಕುಮಾರ್ ಮಾತನಾಡಿ, ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ಕಲ್ಪಿಸಲಾಗಿದೆ. ಉಚಿತ ಕಾನೂನು ನೆರವು ರಾಷ್ಟ್ರ ಮಟ್ಟದವರೆಗೆ ಲಭ್ಯಗೊಳಿಸಿದೆ. ಬಾಲಕಾರ್ಮಿಕರು, ಕಾರ್ಮಿಕರು, ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು, 3 ಲಕ್ಷ ರೂ. ಮಿತಿಯೊಳಗಿನ ಆಸ್ತಿ, ದಾರಿ ಸಮಸ್ಯೆ ಎದುರಿಸುತ್ತಿರುವವರೂ ಉಚಿತ ಕಾನೂನು ಸೇವೆಯ ಸದುಪಯೋಗಪಡಿಸಿಕೊಳ್ಳಬಹುದು ಎಂದು ಹೇಳಿದರು.
ಗ್ರಾಪಂ ಮಾಜಿ ಸದಸ್ಯ ಬಿ.ಎಂ.ನಂಜುಂಡಪ್ಪ ಮಾತನಾಡಿ, ಗ್ರಾಮೀಣ ಜನತೆ ಕಾನೂನಿನ ಅರಿವಿಲ್ಲದೆ ಅನೇಕ ಸಮಸ್ಯೆ ಎದುರಿಸುವಂತಾಗಿದೆ. ಬೇಲೇನಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ನೂರಾರು ಎಕರೆ ಜಮೀನಿನಲ್ಲಿ 50 ವರ್ಷಗಳಿಂದ ಸ್ವಾಧಿನಾನುಭವದಲ್ಲಿರುವ ರೈತರಿಗೆ ಶಿವಮೊಗ್ಗ ಮೂಲದ ಮಧ್ಯವರ್ತಿಯೊಬ್ಬನಿಂದ ಕಿರುಕುಳ ಉಂಟಾಗುತ್ತಿದೆ. ರೈತರು ಈತನ ವಿರುದ್ಧ ಸಾಮೂಹಿಕ ಕಾನೂನು ಹೋರಾಟ ನಡೆಸಲು ಮುಂದಾಗಬೇಕು. ಕಾನೂನು ಸೇವಾ ಸಮಿತಿಯಿಂದ ಸಲಹೆ ಜತೆ ಉಚಿತ ಕಾನೂನು ಸೇವೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ವಕೀಲರ ಸಂಘದ ಕಾರ್ಯದರ್ಶಿ ಎ.ನವೀನ್ಕುಮಾರ್, ಪಿಡಿಒ ಡಿ.ಎಸ್.ರಘುವೀರ್ ಮತ್ತಿತರರಿದ್ದರು.