ಶೃಂಗೇರಿಯಲ್ಲಿ ಬಿಜೆಪಿಯಿಂದ ವಂದೇ ಮಾತರಂ ಕಾಲ್ನಡಿಗೆ ಜಾಥಾ ನಡೆಯಿತು. ಕೋಟ ಶ್ರೀನಿವಾಸ ಪೂಜಾರಿ, ಡಿ.ಎನ್.ಜೀವರಾಜ್, ದಿನೇಶ್, ನೂತನ್‌ಕುಮಾರ್, ಬಿ.ಶಿವಶಂಕರ್, ಕೆ.ಎಸ್.ರಮೇಶ್ ಇತರರಿದ್ದರು. 
ಚಿಕ್ಕಮಗಳೂರು

ಅಲ್ಪಸಂಖ್ಯಾತರ ಓಲೈಕೆಗಾಗಿ ರಾಷ್ಟ್ರಗೀತೆಗೆ ಕತ್ತರಿ trims the national anthem to appease minorities

ಶೃಂಗೇರಿ: ವಂದೇ ಮಾತರಂ ಗೀತೆ ಪೂರ್ಣ ಹಾಡಲು ರಾಷ್ಟ್ರಭಕ್ತರು ಬಹಳಷ್ಟು ಕಾಲ ಕಾಯಬೇಕಾಯಿತು. ಹಿಂದೂಸ್ತಾನದಲ್ಲಿ ದುರ್ಗೆ,ಲಕ್ಷ್ಮೀ ಮುಂತಾದ ದೇವತೆಗಳನ್ನು ಪೂಜಿಸುತ್ತೇವೆ. ಆದರೆ ಮತಕ್ಕಾಗಿ ಅಲ್ಪಸಂಖ್ಯಾತರ ಓಲೈಕೆ ಮಾಡುವವರ ಮನಸ್ಸು ವಂದೇ ಮಾತರಂ ಪೂರ್ತಿ ಹಾಡಲು ಒಪ್ಪುತ್ತಿಲ್ಲ ಎಂದು ಕಾರ್ಕಳದ ವಾಗ್ಮಿ ಶ್ರೀಕಾಂತ್ ಶೆಟ್ಟಿ ಹರಿಹಾಯ್ದರು.

ಶನಿವಾರ ಮೆಣಸೆ ಸರ್ಕಲ್‌ನಿಂದ ಬಸ್ ನಿಲ್ದಾಣದ ತನಕ ಆಯೋಜಿಸಿದ್ದ ವಂದೇ ಮಾತರಂ ಕಾಲ್ನಡಿಗೆ ಜಾಥಾ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂವಿಧಾನ ಹಾಗೂ ಕಾನೂನು ಬದ್ಧವಾಗಿ ವಂದೇ ಮಾತರಂ ಹಾಡಬೇಕು ಎಂಬ ಉಲ್ಲೇಖವಿದೆ. ಆದರೆ ಕಾಂಗ್ರೆಸ್ ಕಾನೂನನ್ನು ಗಾಳಿಗೆ ತೂರಿ ಎರಡು ಚರಣಕ್ಕೆ ರಾಷ್ಟ್ರಗೀತೆಯನ್ನು ಸೀಮಿತಗೊಳಿಸಿಕೊಂಡಿದೆ ಎಂದರು.

ವಂದೇ ಮಾತರಂನಲ್ಲಿ ಹಿಂದೂ ದೇವತೆಗಳ ಉಲ್ಲೇಖವಿದೆ. ದೇವತೆಗಳನ್ನು ಸ್ಮರಿಸುವುದನ್ನು ವಿರೋಧಿಸುವ, ಅನ್ಯಧರ್ಮೀಯರನ್ನು ಓಲ್ಯೆಸುವ ರಾಜ್ಯ ಸರ್ಕಾರ ವಂದೇ ಮಾತರಂ ಗೀತೆಯನ್ನು ವಿರೋಧಿಸುತ್ತಿರುವುದು ದೇಶದ ದುರಂತ. 1905ರಲ್ಲಿ ಬ್ರಿಟಿಷರು ಬಂಗಾಳದ ವಿಭಜನೆಗೆ ಪ್ರಯತ್ನ ಮಾಡಿದ್ದರು. ಈಗ ದೇಶದ ವಿರುದ್ಧವಾಗಿ ವರ್ತಿಸುವವರಿಗೆ ರಾಷ್ಟ್ರಗೀತೆ ಮೇಲೆ ಕಾಳಜಿ ಬರುವುದಿಲ್ಲ ಎಂದು ಹೇಳಿದರು.

ಜಗದ್ಗುರು ಶ್ರೀ ವಿದ್ಯಾರಣ್ಯರ ಅನುಗ್ರಹದಿಂದ ಹಕ್ಕ-ಬುಕ್ಕರು ಮಾಡಿದ ಸತ್ಕಾರ್ಯಗಳಿಂದ ತಾಯಿ ಭುವನೇಶ್ವರಿಯ ವೈಭವ ಚಿರಸ್ಥಾಯಿಯಾಗಿದೆ. ವೀರಸಾರ್ವಕರ್, ರವೀಂದ್ರನಾಥ್ ಟ್ಯಾಗೋರ್, ಕುವೆಂಪು ಅವರು ಭಾರತಮಾತೆಯನ್ನು ಗೌರವಿಸಿದ್ದಾರೆ. ಭಾರತೀಯ ಸಂಸ್ಕೃತಿ ನೆಲೆಗಟ್ಟು ಭದ್ರವಾಗಿಸಲು ಆರ್‌ಎಸ್‌ಎಸ್ ನೀಡಿದ ಕೊಡುಗೆ ಅನನ್ಯ. ರಷ್ಯಾ, ಜರ್ಮನಿ, ಸ್ಪೇನ್ ಮುಂತಾದ ದೇಶಗಳು ಜನ್ಮಭೂಮಿಗೆ ಗೌರವ ನೀಡಿವೆ. ಸಂಸ್ಕೃತಿಯನ್ನು ಗೌರವಿಸದ ರಾಷ್ಟ್ರದ್ರೋಹಿಗಳನ್ನು ಬದಿಗಿಟ್ಟು ಭಾರತಮಾತೆಯನ್ನು ನಿರಂತರ ಗೌರವಿಸುವ ರಾಷ್ಟ್ರಭಕ್ತರು ನಮ್ಮ ಜತೆ ಇದ್ದಾರೆ. ರಾಷ್ಟ್ರಭಕ್ತರ ಒಗ್ಗಟ್ಟಿನಲ್ಲಿ ನಿರಂತರ ಶಕ್ತಿ ಇದೆ. ಭಾರತ ವಿಶ್ವಶಕ್ತಿಯಾಗಬೇಕು. ದೇಶಕ್ಕಾಗಿ ತುಡಿಯುವ, ದುಡಿಯುವವರು ನವಭಾರತ ನಿರ್ಮಾಣಕ್ಕಾಗಿ ಕಟಿಬದ್ಧರಾಗಿ ಇರಬೇಕಿದೆ ಎಂದರು.

ವಂದೇ ಮಾತರಂ ನಮಗೆ ಸ್ಫೂರ್ತಿ ಹಾಗೂ ಶಕ್ತಿ. ಅದು ನಮ್ಮ ದೇಶದ ಅಸ್ಮಿತೆ. ಆದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಆದೇಶವನ್ನು ಗೌರವಿಸುತ್ತಿಲ್ಲ. ನಾವು ಭಾರತೀಯರು ಎಂಬ ಭಾವನೆ, ಕಾಳಜಿ ಅವರಿಗೆ ಇಲ್ಲ. ರಾಜ್ಯ ಸರ್ಕಾರದ ಆದೇಶವನ್ನು ಗ್ರಾಮ ಪಂಚಾಯಿತಿ ತಿರಸ್ಕರಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಅನ್ಯಧರ್ಮೀಯರನ್ನು ಓಲೈಸಲು ಹೊರಟಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ವಂದೇ ಮಾತರಂ ರಾಷ್ಟ್ರಗೀತೆ ದೇಶದ ಅಸ್ಮಿತೆ. ಅದನ್ನು ಕಾಂಗ್ರೆಸ್ ಸರ್ಕಾರ ತಿರಸ್ಕರಿಸುತ್ತಲೇ ಬಂದಿದೆ. ಅನ್ಯಧರ್ಮೀಯರನ್ನು ಓಲೈಕೆ ಮಾಡುವವರು ತಾಯಿ ಭಾರತಿಗೆ ಗೌರವ ನೀಡುವುದಿಲ್ಲ. ನಮ್ಮ ಸಾಂಸ್ಕೃತಿಕ ನೆಲೆಗಟ್ಟು, ಸಂಸ್ಕಾರದ ಮೌಲ್ಯ ಉಳಿಯಬೇಕಾದರೆ ನಾವು ತಾಯಿ ಭಾರತಮಾತೆಯನ್ನು ನಿರಂತರ ಪೂಜಿಸಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ತಿಳಿಸಿದರು.

ಮೆಣಸೆ ಸರ್ಕಲ್‌ನಿಂದ ಬಸ್ ನಿಲ್ದಾಣ ತನಕ ನಡೆದ ವಂದೇ ಮಾತರಂ ಜಾಥಾದಲ್ಲಿ ರಾಷ್ಟ್ರಭಕ್ತರು ಪಾಲ್ಗೊಂಡಿದ್ದರು. ಜಿಲ್ಲಾ ವಂದೇ ಮಾತರಂ ಸಂಚಾಲಕ ದೇವರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರುತಿ ರೋಹಿತ್, ತಲಗಾರು ಉಮೇಶ್, ಎಚ್.ಎಸ್.ವೇಣುಗೋಪಾಲ್, ಮಾಜಿ ಸೈನಿಕ ಮಂಜುನಾಥ್ ಇತರರಿದ್ದರು.