ಶೃಂಗೇರಿ: ಶಾರದಾ ನಗರದಲ್ಲಿ ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ವಾರದ ಸಂತೆ ನಡೆಸದಂತೆ ಪಟ್ಟಣ ಪಂಚಾಯಿತಿ ಎದುರು ಆಹೋರಾತ್ರಿ ಧರಣಿ ನಡೆಸುತ್ತಿರುವ ದಲಿತ ಸಂಘಟನೆಗಳ ಪ್ರತಿಭಟನಾಕಾರರನ್ನು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್. ಶೆಟ್ಟಿ ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದರು.
ಹೋರಾಟಗಾರರ ಅಹವಾಲು ಆಲಿಸಿ ಮಾತನಾಡಿ, ವಿಧಾನಸೌಧದಲ್ಲಿ ಕುಳಿತು ಸರ್ಕಾರ ದಲಿತರ ಪರ ಇದೆ ಎಂದು ಮೊಸಳೆ ಕಣ್ಣಿರು ಹಾಕಬೇಡಿ. ನ್ಯಾಯಯುತವಾಗಿ ಹೋರಾಟ ಮಾಡುವವರಿಗೆ ಬೆಂಬಲ ನೀಡಿ ಎಂದು ಒತ್ತಾಯಿಸಿದರು.
ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ಮಾರುಕಟ್ಟೆ ನಡೆಸುವುದು ಖಂಡನೀಯ. ಮಹಾತ್ಮ ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ದೇಶಕ್ಕೆ ಅಂಬೇಡ್ಕರ್ ಸಂವಿಧಾನ ರಚಿಸಿಕೊಟ್ಟರು. ಅವರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಕಾಂಗ್ರೆಸ್ ಸರ್ಕಾರ ಜಾಗ ಮೀಸಲಿಟ್ಟಿತ್ತು. ಸಾವಿರಾರು ಕೋಟಿ ಹಣವನ್ನು ಸರ್ಕಾರ ಲೂಟಿ ಹೊಡೆಯುತ್ತಿದೆ. ಆದರೆ ಕೇವಲ 30 ಲಕ್ಷ ಹಣ ನೀಡಿ ಭವನ ನಿರ್ಮಿಸಲು ಸಾಧ್ಯವಿಲ್ಲವೇ? ಶಾಸಕ ಟಿ.ಡಿ.ರಾಜೇಗೌಡ ಅವರು ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಬೃಹತ್ ಮಟ್ಟದ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
2011ರಲ್ಲಿ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ 2018ರಲ್ಲಿ ಶಾರದಾ ನಗರದ ಅಸೆಸ್‌ಮೆಂಟ್ ನಂಬರ್ 949/912ರಲ್ಲಿ 100*100 ಜಾಗವನ್ನು ಮೀಸಲಿಟ್ಟಿದ್ದು, ಈಗಿನ ಜಾಗದ ಮಾರುಕಟ್ಟೆ ದರದಲ್ಲಿ ಶೇ.25ರಷ್ಟು ಅಂದರೆ 22 ಲಕ್ಷ ರೂ.ವನ್ನು ನಗರಾಭಿವೃದ್ಧಿ ಇಲಾಖೆಗೆ ಪಟ್ಟಣ ಪಂಚಾಯಿತಿ ಪಾವತಿಸಬೇಕು. ನಂತರ ಜಾಗದಲ್ಲಿ ಭವನ ನಿರ್ಮಾಣ ಅವಕಾಶ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಆದೇಶ ನೀಡಿದ್ದರು. ಆದರೆ ಪಟ್ಟಣ ಪಂಚಾಯಿತಿ ಅಷ್ಟು ಹಣ ಪಾವತಿಸಲು ಸಾಧ್ಯವಿಲ್ಲ ಎಂದು ವಿಳಂಬ ಮಾಡಿತು ಎಂದು ದಲಿತ ಸಂಘಟನೆ ಮುಖಂಡ ಕೆ.ಎಂ.ಗೋಪಾಲ್ ದೂರಿದರು. ಪ್ರಸ್ತುತ ಪಪಂ ಆಡಳಿತಾಧಿಕಾರಿಯಾದ ತಹಸೀಲ್ದಾರ್ ಅನೂಪ್ ಸಂಜೋಗ್ ಅವರು ಶಾಸಕರು ಹೇಳಿದ್ದಾರೆ ಎಂದು ವಾರದ ಸಂತೆ ನಡೆಸಲು ಮುಂದಾಗಿದ್ದಾರೆ. ಆ ಸ್ಥಳವನ್ನು ಸ್ವಚ್ಛಗೊಳಿಸುವಾಗ ಕೆಲಸ ನಿಲ್ಲಿಸಿದ್ದೇವೆ. ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗವನ್ನು ಬೇರೆ ಯಾರಿಗೂ ಬಿಡುವುದಿಲ್ಲ. ಶಾಸಕ ಟಿ.ಡಿ.ರಾಜೇಗೌಡ ಪ್ರಭಾವಿಗಳ ಒತ್ತಡಕ್ಕೆ ಮಣಿದಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಧರಣಿ ಮುಂದುವರಿಸುತ್ತೇವೆ ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಭರತ್ ಗಿಣಿಕಲ್, ದಿನೇಶ್ ಹೆಗ್ಡೆ ಕಲ್ಕಟ್ಟೆ, ಚಂದ್ರಪ್ಪ, ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಶಂಕರ್, ಶೀಲಾ ಸುಖೇಶ್, ಜಲಜಾ, ಗೋಪಾಲ್, ವೈ.ಎಸ್.ಸದಾನಂದ, ಶಾರದಾ ಗೋಪಾಲ್ ಇತರರಿದ್ದರು.