ಕುಡ್ಲೂರು ಗ್ರಾಮದ ಯುವಕನ ಆತ್ಮಹತ್ಯೆಗೆ ಪೊಲೀಸರು ಕಾರಣ ಎಂದು ಆರೋಪಿಸಿ ಬೀರೂರು ಠಾಣೆ ಎದುರು ಮೃತನ ಕುಟುಂಬಸ್ಥರು ಹಾಗೂ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಬೀರೂರು: ಪ್ರೇಮಿಗಳು ನಾಪತ್ತೆಯಾಗಲು ಸಹಕಾರ ನೀಡಿದ ಆರೋಪದ ಮೇಲೆ ಯುವಕನಿಗೆ ಪೊಲೀಸರು ಕಿರುಕುಳ ನೀಡಿದ್ದರಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಯುವಕನ ಸಂಬಂಧಿಗಳು ಹಾಗೂ ದಲಿತ ಪರ ಸಂಘಟನೆ ಸದಸ್ಯರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದ ಚಂದನ್(21) ಮೃತ ದುರ್ದೈವಿ. ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದ ಯುವತಿ ತುಮಕೂರಿನ ಯುವಕನೊಂದಿಗೆ ನಾಪತ್ತೆಯಾಗಿದ್ದಳು. ಇದಕ್ಕೆ ಯುವತಿ ಸ್ನೇಹಿತ ಚಂದನ್ ಕಾರಣ ಎಂದು ಯುವತಿ ಕುಟುಂಬದವರು ಪೊಲೀಸರಿಗೆ ಕೊಟ್ಟ ದೂರಿನ ಹಿನ್ನಲೆಯಲ್ಲಿ ಚಂದನ್ ನನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಬಿಟ್ಟಿದ್ದರು. ಇದರಿಂದ ಮನನೊಂದ ಚಂದನ್ ಭಾನುವಾರ ಸಂಜೆ ತನ್ನ ಅಜ್ಜಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಇದರಿಂದ ಸಿಟ್ಟಿಗೆದ್ದ ಚಂದನ್ ಕಟುಂಬಸ್ಥರು ಹಾಗೂ ದಲಿತ ಪರ ಸಂಘಟನೆಗಳು ಸೋಮವಾರ ಸಂಜೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಯುವತಿ ತನ್ನ ಪ್ರೇಮಿಯೊಂದಿಗೆ ಹೋಗುವುದಾಗಿ ಮತ್ತು ಈ ವಿಚಾರದಲ್ಲಿ ಚಂದು ಅಣ್ಣಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪತ್ರದಲ್ಲಿ ಬರೆದಿಟ್ಟಿದ್ದಾಳೆ. ಅದರೂ ಚಂದನ್‌ನ್ನು ಠಾಣೆಗೆ ಕರೆಸಿ ಹಿಂಸೆ ನೀಡಲಾಗಿದೆ. ಇದಕ್ಕೆ ಕಾರಣದಾರ ಪೊಲೀಸ್ ಸಿಬ್ಬಂದಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು. ಮತ್ತು ಕುಟುಂಬದವರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.