ಹಿರೇಕಾನವಂಗಲ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಮಾಜಿ ಶಾಸಕ ಡಿ.ಎಸ್.ಸುರೇಶ್ ಉದ್ಘಾಟಿಸಿದರು.
ತರೀಕೆರೆ: ಶ್ರದ್ಧಾ ಭಕ್ತಿಯಿಂದ ಆರಾಧಿಸಿ ದೇವರನ್ನು ಒಲಿಸಿಕೊಳ್ಳಬೇಕು ಎಂದು ಹಣ್ಣೆ ಮಠದ ಶ್ರೀಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಹಿರೇಕಾನವಂಗಲ ಗ್ರಾಮದ ಶ್ರೀ ಬೊಮ್ಮಲಿಂಗೇಶ್ವರ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಶ್ರೀ ಸತ್ಯನಾರಾಯಣ ಪೂಜೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಭಾರತೀಯರಾದ ನಾವೆಲ್ಲರೂ ಸನಾತನ ಧರ್ಮದ ಎಲ್ಲ ಆಚರಣೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಪೂಜೆ, ಪುನಸ್ಕಾರ, ದೈವತ್ವದ ಆರಾಧನೆಯಿಂದ ಸಕಲವೂ ಸಿದ್ಧಿಸಲಿದೆ ಎಂದರು.
ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಮಾಜಿಕ ಕಾರ್ಯದ ಮೂಲಕ ಮಹಿಳೆಯರನ್ನು ಸ್ವಾವಲಂಬಿಗೊಳಿಸುತ್ತಿರುವುದು ಮಾತ್ರವಲ್ಲ, ಅಶಕ್ತರ ಕಲ್ಯಾಣಕ್ಕೆ ಶ್ರಮಿಸುತ್ತಿದೆ. ಜತೆಗೆ ಜನರಲ್ಲಿ ಆಧ್ಯಾತ್ಮಿಕತೆ, ಧಾರ್ಮಿಕತೆ ಕುರಿತಾದ ಅರಿವು ಮೂಡಿಸುತ್ತಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ತಾಲೂಕು ಯೋಜನಾಧಿಕಾರಿ ಕೊರಗಪ್ಪ ಪೂಜಾರಿ, ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಪ್ರಕಾಶ್, ಗ್ರಾಮಸ್ಥರಾದ ಕಲ್ಲೇಶಪ್ಪ, ಹಾಲಪ್ಪ, ಸಂಗಪ್ಪ ಮತ್ತಿತರರಿದ್ದರು.