ಬ್ರಹ್ಮಾಕುಮಾರೀಸ್ ಸಂಸ್ಥೆಯ ಚಿಕ್ಕಮಗಳೂರು ಜಿಲ್ಲಾ ನಿರ್ದೇಶಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಡಾ. ಭಾಗ್ಯ 
ಚಿಕ್ಕಮಗಳೂರು

ಆಗಸ್ಟ್ ೨೧ರಿಂದ ೨೫ರವರೆಗೆ ವಿಶ್ವ ಬಂಧುತ್ವದ ರಕ್ತದಾನ ಮಹಾ ಅಭಿಯಾನ

ಚಿಕ್ಕಮಗಳೂರು: ಬ್ರಹ್ಮಾಕುಮಾರೀಸ್ ಸಂಸ್ಥೆಯ ಪೂರ್ವ ಮುಖ್ಯ ಆಡಳಿತಾಧಿಕಾರಿಣಿ ರಾಜಯೋಗಿನಿ ಡಾ. ದಾದೀ ಪ್ರಕಾಶಮಣೀಜೀಯವರ ೧೯ನೇ ಪುಣ್ಯಸ್ಮೃತಿ ದಿನದ ಅಂಗವಾಗಿ ವಿಶ್ವ ಬಂಧುತ್ವದ ರಕ್ತದಾನ ಮಹಾ ಅಭಿಯಾನವನ್ನು ಆಗಸ್ಟ್ ೨೧ರಿಂದ ೨೫ರವರೆಗೆ ದೇಶಾದ್ಯಂತ ಹಾಗೂ ನೇಪಾಳದಲ್ಲಿ ಆಯೋಜಿಸಲಾಗಿದೆ ಎಂದು ಬ್ರಹ್ಮಾಕುಮಾರೀಸ್ ಸಂಸ್ಥೆಯ ಚಿಕ್ಕಮಗಳೂರು ಜಿಲ್ಲಾ ನಿರ್ದೇಶಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಡಾ. ಭಾಗ್ಯ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾದೀ ಪ್ರಕಾಶಮಣಿಜೀ ಅವರ ಪುಣ್ಯಸ್ಮೃತಿ ದಿನವಾದ ಆಗಸ್ಟ್ ೨೫ನ್ನು ಪ್ರತಿವರ್ಷ ವಿಶ್ವ ಸಹೋದರತ್ವ ದಿನವಾಗಿ ಆಚರಿಸಲಾಗುತ್ತದೆ. ರಕ್ತದಾನದ ಮೂಲಕ ನಾವೆಲ್ಲರೂ ಒಂದೇ, ನಾವೆಲ್ಲರೂ ಸಹೋದರರು ಎಂಬ ಸಾರ್ವತ್ರಿಕ ಭಾತೃತ್ವದ ಸಂದೇಶ ಸಾರುವುದು ಹಾಗೂ ರಕ್ತದ ಕೊರತೆಯಿಂದ ಬಳಲುತ್ತಿರುವ ಆಸ್ಪತ್ರೆಗಳಿಗೆ ನೆರವು ನೀಡಿ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳ ಜೀವ ಉಳಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದರು.
ಜಾತಿ, ಧರ್ಮದ ಭೇದವಿಲ್ಲದೆ ಮಾನವಕುಲದ ಒಳಿತಿಗಾಗಿ ಸೇವೆ ಸಲ್ಲಿಸುವ ಆಶಯದೊಂದಿಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ವಿವಿಧ ಸರ್ಕಾರಿ ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ದೇಶಾದ್ಯಂತ ಒಂದೇ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಿ ವಿಶ್ವದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕಳೆದ ೨೦೨೫-೨೬ರಲ್ಲಿ ೮,೮೩೭ ಯುನಿಟ್ ರಕ್ತ ಸಂಗ್ರಹಿಸಿ ವಿಶ್ವದಾಖಲೆ ನಿರ್ಮಿಸಲಾಗಿತ್ತು. ಈ ಬಾರಿ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಜ್ಞಾನ ಪಾನ, ಯೋಗ-ಧ್ಯಾನ, ರಕ್ತದಾನ ಎಂಬ ಸಂದೇಶದೊಂದಿಗೆ ಅಭಿಯಾನ ನಡೆಯಲಿದೆ. ಸಾರ್ವಜನಿಕರು, ಯುವಜನತೆ ಹಾಗೂ ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಗಸ್ಟ್ ೨೨ರಂದು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುವ ಶಿಬಿರದಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ರಕ್ತದಾನ ಮಾಡಲಿದ್ದಾರೆ. ಆಗಸ್ಟ್ ೨೩ರಂದು ಸಾರ್ವಜನಿಕರು ಹಾಗೂ ವಿವಿಧ ಸಂಘ-ಸAಸ್ಥೆಗಳ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ರಕ್ತದಾನ ಶಿಬಿರಗಳ ವಿವರ: ಆಗಸ್ಟ್ ೨೨ರಂದು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ, ಚಿಕ್ಕಮಗಳೂರು, ಆಗಸ್ಟ್ ೨೩ರಂದು ಎಂ.ಎಲ್.ವಿ. ರೋಟರಿ ಹಾಲ್, ಚಿಕ್ಕಮಗಳೂರು, ಆಗಸ್ಟ್ ೨೪ರಂದು ತರೀಕೆರೆಯ ವೆಂಕಟರಾಯನ ಬೀದಿಯ ಬ್ರಹ್ಮಾಕುಮಾರೀಸ್ ಜ್ಞಾನ-ವಿಜ್ಞಾನ ಭವನ, ಮೂಡಿಗೆರೆಯ ಡಾ. ಪಿ.ಎ. ಅಡ್ಯಂತಾಯ ರಂಗಮಂದಿರ ಹಾಗೂ ಕಡೂರಿನ ಕೆ.ಎಂ. ರಸ್ತೆಯ ಸಾರ್ವಜನಿಕ ಗಣಪತಿ ಪೆಂಡಾಲ್‌ನಲ್ಲಿ, ಆಗಸ್ಟ್ ೨೫ರಂದು ಅಜ್ಜಂಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಕಳಸಾಪುರದ ಬಸ್‌ಸ್ಟ್ಯಾಂಡ್ ಸಮೀಪದ ವಿನಾಯಕ ಪ್ರೌಢಶಾಲೆಯಲ್ಲಿ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪ್ರದೀಪ್ ಗೌಡ, ಸಚೀನ್, ಸಂಗೀತಾ ಪ್ರಸಾದ್, ನಂದಕುಮಾರ್ ಹಾಗೂ ಡಾ. ಅನಿತ್ ಕುಮಾರ್ ಉಪಸ್ಥಿತರಿದ್ದರು.