ಕಳಸ ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿ ಮತ್ತು ಅರಣ್ಯ ಇಲಾಖೆಯಿಂದ ಮಹಿಳೆಯರಿಗೆ ಗಿಡ ವಿತರಿಸಲಾಯಿತು. 
ಚಿಕ್ಕಮಗಳೂರು

ಪರಿಸರ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ದೊಡ್ಡದು

ಕಳಸ: ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಮಹಿಳೆಯರ ಪಾತ್ರ ದೊಡ್ಡದು ಎಂದು ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿ ಅಧ್ಯಕ್ಷರಾದ ಕಿರಣ ಬ್ರಹ್ಮದೇವ ಹೇಳಿದರು.
ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿ ಮತ್ತು ಅರಣ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ನಾವು ವಿತರಿಸುತ್ತಿರುವ ಹೂವಿನ ಗಿಡಗಳು ಕೇವಲ ಮನೆಯ ಅಂದ ಹೆಚ್ಚಿಸುವ ಜತೆಗೆ ನಮ್ಮ ಸುತ್ತಮುತ್ತಲಿನ ವಾತಾವರಣಕ್ಕೆ ಹೊಸ ಚೇತನ ನೀಡಲಿವೆ. ಪ್ರತಿಯೊಬ್ಬ ಮಹಿಳೆಯೂ ಕೇವಲ ಗಿಡ ನಡುವುದಕ್ಕೆ ಸೀಮಿತವಾಗದೆ, ಅದನ್ನು ಮಕ್ಕಳಂತೆ ಪೋಷಿಸಿ ಬೆಳೆಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಉಪವಲಯ ಅರಣ್ಯಾಧಿಕಾರಿ ಹರೀಶ್ ಮಾತನಾಡಿ, ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಹಸಿರು ಜಾಗೃತಿ ಮೂಡಿಸಲು ಸದಾ ಬದ್ಧವಾಗಿದೆ. ಈ ದಿನ ನಾವು ವಿತರಿಸಿರುವ ಹಣ್ಣಿನ ಗಿಡಗಳು ಭವಿಷ್ಯದಲ್ಲಿ ನಮಗೆ ಶುದ್ಧ ಗಾಳಿ ನೀಡುವ ಜತೆಗೆ, ಹಸಿವಿಗೆ ಹಣ್ಣುಗಳನ್ನು ಮತ್ತು ಪಕ್ಷಿಗಳಿಗೆ ಆಸರೆ ಒದಗಿಸಲಿವೆ. ಪ್ರತಿಯೊಂದು ಮನೆಯಲ್ಲೂ ಒಂದು ಗಿಡ ಬೆಳೆಸಿದರೆ ಇಡೀ ನಾಡು ಹಸಿರಾಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಮಂಡಳಿ ಸದಸ್ಯೆಯರಿಗೆ ವಿವಿಧ ಸಸಿಗಳನ್ನು ವಿತರಿಸಿ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಲಾಯಿತು. ಮಂಡಳಿ ಹಿರಿಯರಾದ ಚಂಪಾ ಎಂ. ರಾವ್, ಕಾರ್ಯದರ್ಶಿ ಆಶಾ ಗುರುಶೇಟ್, ಖಜಾಂಚಿ ಕಲ್ಪನಾ ಅಜಿತ್, ಹಾಗೂ ನಿರ್ದೇಶಕರಾದ ಾತಿಮಾ ರೆಹಮಾನ್ ಮತ್ತು ಅಮಿತ ವಿನಾಯಕ ಸದಸ್ಯೆಯರಾದ ಪೂರ್ಣಿಮಾ ಪ್ರಮೋದ್, ಜೀನತ್, ವಾಣಿ ಅರವಿಂದ್ ಮತ್ತು ಅನುರಾಧ ಕೃಷ್ಣೇ ಗೌಡ ಇದ್ದರು.