ಮೂಡಿಗೆರೆಯಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಸಚಿವೆ ಮೋಟಮ್ಮ ಉದ್ಘಾಟಿಸಿದರು.  
ಚಿಕ್ಕಮಗಳೂರು

ಲೋಕಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಸಿಗದ ಮಾನ್ಯತೆ

ಮೂಡಿಗೆರೆ: ಮಹಿಳೆಯರ ಜನಸಂಖ್ಯೆ ಪುರುಷರಿಗೆ ಸಮಾನಾಗಿದ್ದರೂ ರಾಜಕೀಯವಾಗಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ. ಮಹಿಳೆಯರಿಗೆ ರಾಜಕೀಯವಾಗಿ ಪ್ರಾತಿನಿಧ್ಯ ಸಿಗಲು ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಮಹಿಳೆಯರಿಗೆ ರಾಜಕೀಯ ಮತ್ತಿತರ ಕ್ಷೇತ್ರದಲ್ಲಿ ಶೇ.33 ರಷ್ಟು ಮೀಸಲಾತಿ ಸಿಗಬೇಕು.ಆದರೆ ಸಚಿವ ಸಂಪುಟದಲ್ಲಿ ಒಬ್ಬ ಅಥವಾ ಇಬ್ಬರು ಮಹಿಳೆಯರನ್ನು ಸೇರಿಸಿಕೊಳ್ಳಲಾಗುತ್ತದೆ. ಲೋಕಸಭೆ- ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ರಾಜಕೀಯವಾಗಿ ಮಹಿಳೆಯರನ್ನು ನಿರಂತರವಾಗಿ ದೂರವಿಡಲಾಗಿದೆ. ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಬೇಕಾಗಿದೆ. ಸರ್ಕಾರ ಮಹಿಳೆಯರಿಗಾಗಿ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಮಂಗಳೂರು ಜಿಲ್ಲೆಯಲ್ಲಿ ಮಹಿಳೆಯರು ಸ್ವ-ಉದ್ಯೋಗ ಮಾಡಿಕೊಂಡಿದ್ದಾರೆ. ಅದಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣ ಬಳಸಿಕೊಂಡಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಲು ಗೃಹಲಕ್ಷ್ಮಿಯ ಅನುದಾನ ಬಳಸಿಕೊಳ್ಳಬೇಕು. ನಾನು ಸಚಿವೆಯಾಗಿದ್ದಾಗ ರಾಜ್ಯದಲ್ಲಿ 1.75 ಲಕ್ಷದ ಸ್ತ್ರೀಶಕ್ತಿ ಗುಂಪುಗಳನ್ನು ರಚಿಸಿದ್ದೆನೆ. ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಆದರೆ 2004 ರಿಂದ ನಿರಂತರವಾಗಿ 20 ವರ್ಷ ಚುನಾವಣೆಯಲ್ಲಿ ನನ್ನನ್ನು ಮೂಡಿಗೆರೆ ಕ್ಷೇತ್ರದಲ್ಲಿ ಸೋಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಧ್ಯಪ್ರಾಚ್ಯದ ಯುದ್ದದಿಂದ ಗ್ಯಾಸ್ ಟ್ರಬಲ್ ಉಂಟಾಗಿದೆ. ಹಿಂದೆ ಸೀಮೆಎಣ್ಣೆ ಸಿಗುತ್ತಿತ್ತು. ಈಗ ಸೀಮೆಎಣ್ಣೆ ಸಿಗುತ್ತಿಲ್ಲ. ಗ್ರಾಮೀಣ ಮಹಿಳೆಯರು ತಲೆಯಲ್ಲಿ ಸೌದೆ ಹೊತ್ತು ತಂದು ಅಡುಗೆ ಮಾಡುತ್ತಾರೆ. ನಗರ ಪ್ರದೇಶದಲ್ಲಿ ಸೌದೆಯೂ ಇಲ್ಲ, ಸೀಮೆಎಣ್ಣೆಯೂ ಇಲ್ಲ. ಅಡುಗೆ ಅನಿಲದ ಕೊರತೆಯಿಂದ ಮಹಿಳೆಯರು ಕಂಗೆಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರ ಮೇಲೆ ದೌರ್ಜನ್ಯ ಅತ್ಯಾಚಾರದಂತಹ ಪ್ರಕರಣಗಳು ಮಿತಿ ಮೀರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಬಚಾವೋ ಭೇಟಿ ಪಡಾವೋ ಎಂದು ಹೇಳುತ್ತಾರೆ. ಉತ್ತರ ಪ್ರದೇಶದಲ್ಲಿ ಹಲವಾರು ಮಹಿಳೆಯರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆ. ಆ ರಾಜ್ಯದಲ್ಲಿ ಆರಂಭವಾದ ಮಹಿಳೆಯರ ಮೇಲಿನ ದೌರ್ಜನ್ಯ ದೇಶಾದ್ಯಂತ ಮುಂದುವರಿದಿದೆ. ಇದು ಮಹಿಳೆಯರ ಆತ್ಮ ಬಲ ಕುಗ್ಗುವಂತೆ ಮಾಡಿದೆ ಎಂದು ಹೇಳಿದರು.