- ಎಐ ತಂತ್ರಜ್ಞಾನ ದುರ್ಬಳಕೆ
- ೩೦ ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ
ಚಿಕ್ಕಮಗಳೂರು: ಎಐ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಗೃಹಿಣಿಯೊಬ್ಬರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬರೋಬ್ಬರಿ ೩೦ ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಬ್ಲಾಕ್‌ಮೇಲ್‌ಗೆ ಮಣಿಯದಿದ್ದಾಗ ಕಿಡಿಗೇಡಿಗಳು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದರಿಂದ ಮನನೊಂದ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದ ಗೃಹಿಣಿಯೊಬ್ಬರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆ. ಆರೋಪಿಗಳು ಎಐ ತಂತ್ರಜ್ಞಾನ ಬಳಸಿ ಗೃಹಿಣಿಯ ಫೋಟೋಗಳನ್ನು ವಿಕೃತವಾಗಿ ಎಡಿಟ್ ಮಾಡಿದ್ದಾರೆ. ಬಳಿಕ ಆ ಫೋಟೋಗಳನ್ನು ಗೃಹಿಣಿಯ ಮೊಬೈಲ್‌ಗೇ ಕಳುಹಿಸಿ ೩೦ ಲಕ್ಷ ರೂಪಾಯಿ ನೀಡುವಂತೆ ಡಿಮ್ಯಾಂಡ್ ಇಟ್ಟಿದ್ದಾರೆ. ಒಂದು ವೇಳೆ ಹಣ ನೀಡದಿದ್ದರೆ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಆರೋಪಿಗಳ ಬೆದರಿಕೆಗೆ ಗೃಹಿಣಿ ಹಾಗೂ ಅವರ ಕುಟುಂಬದವರು ಬಗ್ಗದಿದ್ದಾಗ ಕಿರಾತಕರು ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆಯೊಂದನ್ನು ತೆರೆದಿದ್ದಾರೆ. ಅದರಲ್ಲಿ ಎಡಿಟ್ ಮಾಡಿದ ಗೃಹಿಣಿಯ ಫೋಟೋಗಳನ್ನು ಅಪ್‌ಲೋಡ್ ಮಾಡಿ ಕೇವಲ ೩೦೦ ರೂಪಾಯಿಗೆ ಲಭ್ಯವಿದ್ದಾರೆ ಎಂದು ಅತ್ಯಂತ ಅಶ್ಲೀಲವಾಗಿ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋಗಳನ್ನು ನೋಡಿ ತೀವ್ರ ಅವಮಾನ ಹಾಗೂ ಮಾನಸಿಕ ನೊಂದ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ಸಂಬAಧಿಸಿದAತೆ ಸಂತ್ರಸ್ತ ಗೃಹಿಣಿಯ ಪತಿ ಲಕ್ಕವಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದೇ ಗ್ರಾಮದ ಅಕ್ಷಯ್ ಹಾಗೂ ಸಾಹುಲ್ ಹಮೀದ್ ಎಂಬ ಇಬ್ಬರು ಯುವಕರೇ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ನೇರವಾಗಿ ಆರೋಪಿಸಲಾಗಿದೆ. ಗೃಹಿಣಿಯ ಮೊಬೈಲ್‌ಗೆ ಬಂದಿದ್ದ ಮೆಸೇಜ್‌ಗಳು ಹಾಗೂ ಮೊಬೈಲ್ ಸಂಖ್ಯೆಗಳ ಆಧಾರದ ಮೇಲೆ ಪತಿ ದೂರು ದಾಖಲಿಸಿದ್ದಾರೆ.
ಅಲ್ಲದೆ ಈ ಹಿಂದೆ ಕೂಡ ಇದೇ ಯುವಕರು ಬೇರೆ ಮಹಿಳೆಯರಿಗೂ ಇದೇ ರೀತಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಈ ಜಾಲದ ಹಿಂದೆ ಇವರz್ದೆÃ ಕೈವಾಡವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಕೃತ ಫೋಟೋಗಳನ್ನು ಹರಿಬಿಟ್ಟು, ಗೃಹಿಣಿಯ ಆತ್ಮಹತ್ಯೆ ಯತ್ನಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಕಿಡಿಗೇಡಿಗಳ ಬಂಧನಕ್ಕಾಗಿ ಪೊಲೀಸರು ಕ್ರಮಕೈಗೊಂಡಿದ್ದಾರೆ.