ಎನ್.ಆರ್.ಪುರ ತಾಪಂನಲ್ಲಿ ಕೆಡಿಪಿ ಸಭೆ ನಡೆಯಿತು. ಶಾಸಕ ಟಿ.ಡಿ.ರಾಜೇಗೌಡ, ಡಾ. ಕೆ.ಪಿ.ಅಂಶುಮಂತ್, ಎಚ್.ಡಿ.ನವೀನ್‌ಕುಮಾರ್, ಡಾ. ನೂರುಲ್‌ಹುದಾ ಇದ್ದರು.
ಎನ್.ಆರ್.ಪುರ: ಪ್ರತಿ ಮನೆಗೂ ಶುದ್ಧ ನೀರು ಒದಗಿಸುವ ಜಲ್‌ಜೀವನ ಮಿಷನ್ ಯೋಜನೆ ಕಾಮಗಾರಿ ಕಳಪೆಯಾಗಿರುವುದರಿಂದ ಯಾವುದೇ ಮನೆಗೂ ಸಮರ್ಪಕವಾಗಿ ನೀರು ಬಂದಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಅವರು ಜೆಜೆಎಂ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾಪಂನಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜೆಜೆಎಂ ಯೋಜನೆ ಕಾಮಗಾರಿ ಸಮಗ್ರ ತನಿಖೆ ನಡೆಸಲು ತೀರ್ಮಾನಿಸಿದೆ. ಜೆಜೆಎಂ ಕಾಮಗಾರಿ ಬಹುತೇಕ ಕಡೆ ಕಳಪೆಯಾಗಿದೆ ಎಂಬ ದೂರು ಬಂದಿದೆ. ಯಾವುದೇ ಕಾರಣಕ್ಕೂ ಬಿಲ್ ಪಾವತಿಸಕೂಡದು. ಬಿಲ್ ಪಾವತಿಗೆ ಸಲ್ಲಿಸಿದ್ದರೂ ತಡೆ ಹಿಡಿಯಿರಿ ಎಂದು ಸೂಚಿಸಿದರು.
ಮೊದಲು ನೀರಿನ ಮೂಲ ನೋಡಿ ನಂತರ ಟ್ಯಾಂಕ್ ನಿರ್ಮಿಸಬೇಕು. ಪೈಪ್‌ಲೈನ್ ಮಾಡಬೇಕು. ಆದರೆ ಬಹುತೇಕ ಕಡೆ ಮೊದಲೇ ಪೈಪ್‌ಲೈನ್ ಮಾಡಿದ್ದಾರೆ. ಪ್ರತಿ ಸಭೆಯಲ್ಲೂ ಹೇಳಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಗ್ರಾಪಂಗಳು ಕಳಪೆ ಕಾಮಗಾರಿಯನ್ನು ಹಸ್ತಾಂತರ ಮಾಡಿಕೊಳ್ಳಬಾರದು ಎಂದು ಪಿಡಿಒಗಳಿಗೆ ಸೂಚಿಸಿದರು.
ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಕಳೆದ ಕೆಡಿಪಿ ಸಭೆಯಲ್ಲೂ ಜೆಜೆಎಂ ಕಳಪೆ ಕಾಮಗಾರಿ ಕುರಿತು ಚರ್ಚೆ ನಡೆದಿತ್ತು. ಕಳಪೆ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳು ಏನು ಕ್ರಮ ತೆಗೆದುಕೊಂಡಿದ್ದೀರಿ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಮಾತನಾಡಿ, ನೀರಿನ ಮೂಲವಿದ್ದು ನೀರು ಮನೆಗಳಿಗೆ ಸರಬರಾಜು ಆಗುತ್ತಿದೆಯೇ ಎಂದು ಪರಿಶೀಲಿಸಿದ ನಂತರವೇ ಗ್ರಾಪಂಗೆ ಹಸ್ತಾಂತರಿಸಿಕೊಳ್ಳಲಾಗಿದೆ. 167 ಕಾಮಗಾರಿಗಳಲ್ಲಿ 123 ಬೋರ್‌ವೆಲ್ ಕೊರೆಸಲಾಗಿದೆ. 86 ಬೋರ್‌ವೆಲ್ ಸಲವಾಗಿವೆ. 37 ಹಳೆಯ ನೀರಿನ ಮೂಲದ್ದಾಗಿವೆ. 91 ಕಾಮಗಾರಿಗಳನ್ನು ಹಸ್ತಾಂತರಿಸಿಕೊಳ್ಳಲಾಗಿದೆ. ಇನ್ನುಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ನೀರಿನ ಮೂಲಗಳಿರುವ ಕಾಮಗಾರಿಗಳನ್ನು ಮಾತ್ರ ಹಸ್ತಾಂತರಿಸಿಕೊಳ್ಳಲಾಗಿದೆ ಎಂದರು.
ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಸುನೀಲ್‌ಕುಮಾರ್ ಸಭೆಗೆ ಮಾಹಿತಿ ನೀಡಿ, ಜೆಜೆಎಂನಲ್ಲಿ 162 ಕಾಮಗಾರಿ ಪ್ರಾರಂಭವಾಗಿದ್ದು ಇದರಲ್ಲಿ 91 ಕಾಮಗಾರಿ ಮುಕ್ತಾಯವಾಗಿವೆ ಎಂದರು.
ಕೆಡಿಪಿ ಸದಸ್ಯರಾದ ಮಾಳೂರುದಿಣ್ಣೆ ರಮೇಶ್, ಕೆ.ವಿ.ಸಾಜು, ಅಂಜುಮ್, ಪ್ರವೀಣ್, ಪಿಸಿಎಆರ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಸುಂದರೇಶ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಯಪಾಲ್ ಇತರರಿದ್ದರು.