ಬಾಳೆಹೊನ್ನೂರು ಸಮೀಪದ ದೇವದಾನ ಗ್ರಾಪಂ ವ್ಯಾಪ್ತಿಯ ಹೊನ್ನೇಕೊಪ್ಪದಲ್ಲಿ ಕಾಡಾನೆ ದಾಳಿಯಿಂದ ಹಾನಿಗೀಡಾಗಿರುವ ತೋಟ.
ಬಾಳೆಹೊನ್ನೂರು: ಖಾಂಡ್ಯ ಹೋಬಳಿಯ ದೇವದಾನ ಗ್ರಾಪಂ ವ್ಯಾಪ್ತಿಯ ಹೊನ್ನೇಕೊಪ್ಪದಲ್ಲಿ ಭಾನುವಾರ ರಾತ್ರಿ ಕಾಡಾನೆ ಹಲವು ರೈತರ ತೋಟಗಳಿಗೆ ದಾಳಿ ಮಾಡಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.
ಹೊನ್ನೇಕೊಪ್ಪದ ಜೋನಿ ಎಂಬುವರ ತೋಟಕ್ಕೆ ಭಾನುವಾರ ರಾತ್ರಿ ಲಗ್ಗೆಯಿಟ್ಟಿರುವ ಕಾಡಾನೆ ಕಾಫಿ, ಅಡಕೆ ಹಾಗೂ ಬಾಳೆ ಗಿಡಗಳನ್ನು ತುಳಿದು ನಾಶ ಮಾಡಿದೆ.
ಕಳೆದ ಕೆಲವು ತಿಂಗಳಿಂದ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದ ಕಾಡಾನೆ ಹಾವಳಿ ಇದೀಗ ಪುನಃ ಆರಂಭವಾಗಿದ್ದು ಖಾಂಡ್ಯ ಹೋಬಳಿಯ ವಿವಿಧೆಡೆ ಅಲ್ಲಲ್ಲಿ ಕಾಡಾನೆಗಳು ಕಂಡುಬರುತ್ತಿವೆ. ಎಲೆಕಲ್ಲು ಬಳಿಯ ಬಸವನಕೋಟೆ ಮೀಸಲು ಅರಣ್ಯ ಭಾಗದಲ್ಲಿಯೂ ಕಾಡಾನೆಯೊಂದಿದ್ದು ಹಲವು ಬಾರಿ ಮುಖ್ಯರಸ್ತೆಯಲ್ಲಿ ಬಂದು ವಾಹನಗಳಿಗೆ ಅಡ್ಡಲಾಗಿದೆ.
ಬಾಳೆಹೊನ್ನೂರು ಸಮೀಪದ ಮಹಲ್ಗೋಡು, ಹಲಸೂರು, ನೇಮನಹಳ್ಳಿ, ಹೊನ್ನಳ್ಳಿ ಮುಂತಾದ ಕಡೆಗಳಲ್ಲಿಯೂ ಕಾಡಾನೆಯೊಂದು ಇತ್ತೀಚೆಗೆ ಕಾಣಿಸಿಕೊಂಡು ಕೆಲವು ರೈತರ ತೋಟಗಳಿಗೆ ದಾಳಿ ಮಾಡಿದೆ. ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಮಲೆನಾಡು ಭಾಗದಲ್ಲಿ ಕಾಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿ ರೈತರ ಭತ್ತದ ಗದ್ದೆ, ತೋಟಗಳಿಗೆ ಲಗ್ಗೆಯಿಡುವುದು ಮಾಮೂಲಾಗಿದ್ದು ಕಳೆದ ಬಾರಿ ಹಲವು ಜೀವ ಹಾನಿಗಳೂ ಆಗಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾಡಾನೆಗಳ ಬಗ್ಗೆ ನಿಗಾವಹಿಸಿ ಕಾಡಿಗೆ ಅಟ್ಟಿ ಜನರ ಜೀವ, ಆಸ್ತಿಪಾಸ್ತಿ ರಕ್ಷಣೆಗೆ ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.