ಪ್ರಮುಖ ಮುಖ್ಯಾಂಶಗಳು
ಶೃಂಗೇರಿ: ಕಿಗ್ಗಾ ಮಘೇಬೈಲು ಗ್ರಾಮದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಅಡಕೆ ಸುಲಿಯಲು ಗುರುವಾರ ಕೆಲಸಕ್ಕೆ ಹೋದ ತಾಯಿ ಗುಲಾಬಿ ಅವರನ್ನು ಮತ್ತೆ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದ ಮಗ ನಾಗರಾಜ್ ನಾಯಕ್ ಅವರಿಗೆ ದಾರಿ ಮಧ್ಯೆ ಬಿದಿರು ತಿನ್ನುತ್ತಿದ್ದ ಕಾಡಾನೆ ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಮಗ ತಾಯಿಗೆ ತಿಳಿಸಿ ಇಬ್ಬರೂ ಸಮೀಪದಲ್ಲಿ ಇರುವ ಮನೆಯತ್ತ ಓಡಿ ಸುರಕ್ಷಿತವಾಗಿದ್ದಾರೆ. ಬಳಿಕ ಅಡಕೆ ಸುಲಿತಕ್ಕೆ ಹೋದ ಇತರರಿಗೆ ಕಾಡಾನೆ ಇರುವ ವಿಷಯ ತಿಳಿಸಿದ್ದಾರೆ. ಅವರ ಮನೆಯ ತೋಟದ ಬಾಳೆಗಿಡಗಳನ್ನು ಕಾಡಾನೆ ತಿಂದಿದೆ. ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆನೆ ಶುಕ್ರವಾರ ಕಿತ್ಲೆಮನೆಕೊಡಿಗೆ ಕಡೆ ತೆರಳಿದ್ದು, ಕಾಡಾನೆ ಆಗುಂಬೆ ಭಾಗದಿಂದ ಬಂದು ನರಸಿಂಹ ಪರ್ವತದ ಕೆಳಭಾಗದಿಂದ ಮೇಬೈಲ್‌ನತ್ತ ಬಂದಿದೆ ಎನ್ನಲಾಗುತ್ತಿದೆ.