ಎನ್.ಆರ್.ಪುರದ ವಿವಿಧ ಗ್ರಾಮಸ್ಥರು ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಂಜುನಾಥ್, ಮನುಕುಮಾರ್, ವಿಕಾಸ್, ಸತೀಶ್, ಭವಾನಿ, ಭಾಗ್ಯಾ, ಅಶ್ವಿನಿ ಇತರರಿದ್ದರು.
- ಸಿದ್ಧನಕೊಡಿಗೆ ಕಾಲನಿಯಲ್ಲಿ
- ಬ್ಯಾಗ್ ಎಸೆದು
- ಬಸ್‌ಗಾಗಿ ಕಾಯುತ್ತಿದ್ದ ಮಕ್ಕಳು
ಎನ್.ಆರ್.ಪುರ: ಗುಬ್ಬಿಗಾ ಗ್ರಾಮ ಪಂಚಾಯಿತಿ ಸಿದ್ಧನಕೊಡಿಗೆ ಕಾಲನಿ ಮುಖ್ಯ ರಸ್ತೆಯಲ್ಲಿ ಶಾಲಾ ಬಸ್‌ಗಾಗಿ ಕಾಯುತ್ತಿದ್ದ ಮಕ್ಕಳನ್ನು ಒಂಟಿ ಸಲಗ ಬೆನ್ನಟ್ಟಿ ಬಂದಿದ್ದು, ಮಕ್ಕಳು ಓಡಿಹೋಗಿ ಅಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಬೆಳಗ್ಗೆ 8.45ರ ಸುಮಾರಿಗೆ ಸಿದ್ಧನಕೊಡಿಗೆ ಕಾಲನಿಯಲ್ಲಿ ಬಿ.ಎಚ್.ಕೈಮರ ಹಾಗೂ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢಶಾಲೆಗೆ ಹೋಗಲು 6 ವಿದ್ಯಾರ್ಥಿಗಳು ಶಾಲಾ ಬಸ್‌ಗಾಗಿ ಕಾಯುತ್ತಿದ್ದರು. ಅದೇ ರಸ್ತೆಯಲ್ಲಿ ಕಾಣಿಸಿಕೊಂಡ ಒಂಟಿ ಆನೆ ವೇಗವಾಗಿ ಬಂದಿದೆ. ತಕ್ಷಣ ಶಾಲಾ ಮಕ್ಕಳು ಬ್ಯಾಗ್ ಎಸೆದು ಸಮೀಪದ ಮನೆಗಳಿಗೆ ಓಡಿ ಹೋಗಿದ್ದಾರೆ. ಸ್ವಲ್ಪ ದೂರ ಬಂದ ಆನೆ ನಂತರ ಪಕ್ಕದ ಅಕೇಶಿಯಾ ಪ್ಲಾಂಟೇಷನ್ ಕಡೆಗೆ ಹೋಗಿದೆ. ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದಾಗ ಆನೆ ಕಾಣಲಿಲ್ಲ. ಆನೆಯ ಹೆಜ್ಜೆ ಗುರುತು ಕಂಡಿದೆ.
ಕಾಡಾನೆಯು ಶಾಲೆಯ ಮಕ್ಕಳನ್ನು ಬೆನ್ನಟ್ಟಿದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಬಂದು ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಎಂ.ಎನ್.ನಾಗೇಶ್ ಮಾತನಾಡಿ, ಆ ಭಾಗದಲ್ಲಿ ಮೂರು ಒಂಟಿ ಆನೆಗಳು ಸುತ್ತಾಡುತ್ತಿವೆ. ಅದರಲ್ಲಿ ಒಂದು ಪುಂಡಾನೆ ಮಕ್ಕಳನ್ನು ಅಟ್ಟಿಸಿಕೊಂಡು ಬಂದಿದೆ. ಕಾಡಿನಿಂದ ಗ್ರಾಮಕ್ಕೆ ಆನೆ ಬಾರದಂತೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು. ಭದ್ರಾ ಹಿನ್ನೀರಿನಿಂದ ಒಂಟಿ ಆನೆ ಸ್ಥಳಾಂತರಿಸಬೇಕು ಎಂದು ಬೇಸಿಗೆ ದಿನದಲ್ಲೇ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದೆವು. ಅವರು ಭರವಸೆ ನೀಡಿದ್ದರು. ಆದರೆ ಭರವಸೆ ಈಡೇರಿಸಿಲ್ಲ. ಆನೆಯಿಂದ ಅವಘಡವಾಗದಂತೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಡಿ.ಲೋಕೇಶ್ ಮಾತನಾಡಿ, ಪುಂಡಾನೆ ಹಿಡಿದು ಸ್ಥಳಾಂತರಿಸಬೇಕು. ಪಟಾಕಿ ಸಿಡಿಸಿ ಓಡಿಸಿದರೂ ಮತ್ತೆ ಬರುತ್ತಿದೆ. ನಾಲ್ಕು ಗ್ರಾಮಗಳ ಜನರಿಗೆ ತೀವ್ರ ತೊಂದರೆ ನೀಡುತ್ತಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀಹರ್ಷ ಮಾತನಾಡಿ, ಯಾವುದೇ ಅನಾಹುತ ಆಗುವ ಮುನ್ನ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ಬೆಳೆ ಹಾನಿಯಾದರೆ ಮತ್ತೆ ಬೆಳೆ ಬೆಳೆಯಬಹುದು. ಆದರೆ ಜೀವ ಹಾನಿಯಾದರೆ ಯಾರು ಜವಾಬ್ದಾರಿ? ಅರಣ್ಯ ಇಲಾಖೆ ಭರವಸೆ ನೀಡಿದಂತೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಉಪ ವಲಯ ಅರಣ್ಯಾಧಿಕಾರಿ ಬೀರೇಶ್ ಹೊನ್ನಮ್ಮನವರ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮಸ್ಥರ ಪ್ರಕಾರ 6 ತಿಂಗಳಿಂದ ಅರಳಿಕೊಪ್ಪ, ವಗಡೆ, ಸಂಕ್ಸೆ, ಗುಬ್ಬಿಗಾ ಗ್ರಾಮಗಳಲ್ಲೇ ಒಂಟಿ ಆನೆ ಸುತ್ತಾಡುತ್ತ ಅಡಿಕೆ, ಬಾಳೆ, ತೆಂಗಿನ ಮರ ಹಾಗೂ ಭತ್ತದ ಗದ್ದೆ ಹಾಳು ಮಾಡುತ್ತಿದೆ. ಅರಣ್ಯ ಇಲಾಖೆ ಹಾಗೂ ಆನೆ ನಿಗ್ರಹ ಪಡೆಯವರು ಆಗಮಿಸಿ ಪಟಾಕಿ ಸಿಡಿಸಿ ಕಾಡಾನೆ ಅಟ್ಟಿದರೂ ವಾಪಸ್ ಬಂದು ಇದೇ ಗ್ರಾಮಗಳಲ್ಲೇ ಸುತ್ತಾಡುತ್ತಿದೆ. ಹೆಚ್ಚಾಗಿ ಸಿದ್ಧನಕೊಡಿಗೆ, ಮಾವಿನಮನೆ, ಗುಡಿಕೆರೆ, ಕೋಡಿಹಳ್ಳಿ, ಟೆಂಕಬೈಲು ಮುಂತಾದ ಹಳ್ಳಿಗಳಲ್ಲೇ ಸುತ್ತಾಡುತ್ತಿದೆ.
ಗ್ರಾಮಸ್ಥರಾದ ಮಾವಿನಮನೆ ಮಂಜುನಾಥ್, ಸಿದ್ಧನಕೊಡಿಗೆ ಮನುಕುಮಾರ್, ಗುಡ್ಡಿಕೆರೆ ಸುಮಂತ್, ವಿಕಾಸ್, ಕಲ್ಮನೆ ಸತೀಶ್, ಮಂಜು, ಭವಾನಿ, ಭಾಗ್ಯಾ, ಗಾನವಿ, ಗೀತಾ, ಅಶ್ವಿನಿ ಇತರರಿದ್ದರು.