ಮೂಡಿಗೆರೆ: ಹವಾಮಾನ ವೈಪರೀತ್ಯದಿಂದ ರೈತರ ಬೆಳೆ ನಷ್ಟಕ್ಕೆ ಅನುಗುಣವಾಗಿ ವಿಮಾ ಸೌಲಭ್ಯವನ್ನು Crop Insurance ಸರ್ಕಾರ ಮಂಜೂರು ಮಾಡಿದೆ. ಆದರೆ ವಿಮಾ ಸಂಸ್ಥೆಗಳು ಯಾವ ಮಾನದಂಡಗಳನ್ನು ಆಧರಿಸಿ ವಿಮಾ ಹಣವನ್ನು ರೈತರಿಗೆ ಪಾವತಿ ಮಾಡುತ್ತಾರೆ ಎಂಬ ಮಾಹಿತಿ ನೀಡಿಲ್ಲ. ವಿಮಾ ಸಂಸ್ಥೆ ಅಧಿಕಾರಿಗಳು ಕೂಡಲೇ ರೈತರಿಗೆ ಮಾಹಿತಿ ನೀಡಬೇಕು ಎಂದು ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಕಳೆದ ವರ್ಷ ಗಾಳಿ, ಮಳೆ ಹೆಚ್ಚಾಗಿ ಕಾಳುಮೆಣಸು ಹಾಗೂ ಅಡಕೆ ಬೆಳೆ ನಾಶವಾಗಿದೆ. ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಮೂಡಿಗೆರೆ ಮತ್ತು ಕಳಸ ತಾಲೂಕಿನಲ್ಲಿ ಶೇ.35ರಷ್ಟು ಬೆಳೆ ಹಾನಿಯಾಗಿದೆ ಎಂದು ಪರಿಗಣಿಸಿ ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಆದರೆ ವಿಮಾ ಸಂಸ್ಥೆ ಪಾವತಿ ಮಾಡುತ್ತಿರುವ ಪೇ ಔಟ್ ಹಣ ಅತ್ಯಲ್ಪವಾಗಿದೆ. ವಿಮಾ ಪ್ರೀಮಿಯಂ ಮೊತ್ತದಲ್ಲಿ ಬೆಳೆಗಾರರ ಪಾಲಿನ ಕಂತಿನ ಹಣದ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಮ್ಮ ಪಾಲಿನ ಹಣವನ್ನು ವಿಮಾ ಸಂಸ್ಥೆಗಳಿಗೆ ಪಾವತಿ ಮಾಡಿರುತ್ತಾರೆ. ಆದರೆ ವಿಮಾ ಕಂಪನಿ ಬೆಳೆಗಾರರ ನಷ್ಟವನ್ನು ಭರಿಸುವಾಗ ಯಾವ ಮಾನದಂಡ ಅನುಸರಿಸುತ್ತಾರೆಂಬ ಮಾಹಿತಿ ತೋಟಗಾರಿಕೆ ಇಲಾಖೆಗೆ ಇರಬೇಕಾಗುತ್ತದೆ ಎಂದರು.
ಮೂಡಿಗೆರೆ ಹಾಗೂ ಕಳಸ ತಾಲೂಕಿನಲ್ಲಿ ಹವಾಮಾನ ಮತ್ತು ಮಳೆ ಮಾಪನ ಕೇಂದ್ರ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ವಿಮಾ ಕಂಪನಿಗಳು ಯಾವ ಆಧಾರದಲ್ಲಿ ನಷ್ಟ ಅಂದಾಜು ಮಾಡಲು ಸಾಧ್ಯ. ಸರ್ಕಾರ ಕೂಡಲೇ ಗಮನಹರಿಸಿ ತೋಟಗಾರಿಕಾ ಇಲಾಖೆ ಹಾಗೂ ವಿಮಾ ಕಂಪನಿಗಳ ಕಾರ್ಯವಿಧಾನದ ಕುರಿತು ಬೆಳೆಗಾರರಿಗೆ ವಿವರ ಮಾಹಿತಿ ನೀಡಬೇಕು. ಬೆಳೆಗಾರರ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು. ಸರ್ಕಾರ ಸ್ಥಾಪಿಸಿರುವ ವಿಮಾ ಯೋಜನೆ ರೈತರ ನೆರವಿಗೆ ಬರುವಂತೆ ಹಿರಿಯ ಅಧಿಕಾರಿಗಳು ವಿಮಾ ಸಂಸ್ಥೆಗಳಿಗೆ ಕಟ್ಟು ನಿಟ್ಟಾದ ಸೂಚನೆ ನೀಡಿ ಬೆಳೆ ವಿಮೆ ಪಾವತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ.