ಮೂಡಿಗೆರೆ: ರೈತರ 10 ಎಚ್‌ಪಿ ಪಂಪ್‌ಸೆಟ್ಗಳಿಗೆ ಉಚಿತ ವಿದ್ಯುತ್ ಪೂರೈಕೆ ಹಾಗೂ ಕಾಫಿ ಬೆಳೆಗಾರರ ಪಂಪ್‌ಸೆಟ್ ವಿದ್ಯುತ್ ಬಾಕಿ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಅಡ್ಯಂತಾಯ ರಂಗಮಂದಿರದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಜಾಸೇವೆ ಕಾರ್ಯಕ್ರಮವನ್ನು ಪ್ರತಿ ಶನಿವಾರ ಶಾಸಕರು ಹೋಬಳಿ ಕೇಂದ್ರದಲ್ಲಿ ನಡೆಸುತ್ತಾರೆ. ತಾಲೂಕು ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಲಾಗುವುದು. ಅಲ್ಲಿಗೆ ಬರುವ ಎಲ್ಲ ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದರು.
ಕೆಲವು ಗಂಭೀರ ಸ್ವರೂಪದ ಪ್ರಕರಣದ ಅರ್ಜಿಗಳನ್ನು ಒಂದು ವಾರದಲ್ಲಿ ಇತ್ಯರ್ಥಪಡಿಸಲಾಗುವುದು. ಮಾಜಿ ಸೈನಿಕರಿಗೆ ಜಾಗ ನೀಡಲು ಸರ್ಕಾರ ತಯಾರಿ ನಡೆಸಿದೆ. ರೈತರ ಜಮೀನಿನ ಪಕ್ಕಾಪೋಡಿ ಮಾಡಿಕೊಡಲು ವಿಳಂಬ ಮಾಡಬಾರದು. ಸಾರ್ವಜನಿಕರು ಅರ್ಜಿ ಹಿಡಿದು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಜನರ ಕೆಲಸ ಮಾಡಿಕೊಡಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾತನಾಡಿ, ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಜನರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಅವಕಾಶವಿದೆ. ಸಲ್ಲಿಕೆಯಾಗುವ ಅಹವಾಲುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುವುದು. ಜಿಲ್ಲೆಯಲ್ಲಿ 1003 ಅರ್ಜಿಗಳು ಬಂದಿವೆ. ಅದರಲ್ಲಿ 760 ಅರ್ಜಿ ಇತ್ಯರ್ಥವಾಗಿದೆ. ಇನ್ನು 243 ಅರ್ಜಿ ಇತ್ಯರ್ಥಕ್ಕೆ ಬಾಕಿ ಉಳಿದಿದೆ. ಅದನ್ನು ಶೀಘ್ರ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
ರೈತ ಹಿತರಕ್ಷಣಾ ಸಮಿತಿಯ ಸುರೇಂದ್ರ, ಸಿಪಿಐ ತಾಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಕಾರ್ಯದರ್ಶಿ ಕೆ.ಡಿ.ಮನೋಹರ್, ವಸತಿಗಾಗಿ ಹೋರಾಟ ವೇದಿಕೆ ಸದಸ್ಯ ಬಿ.ರುದ್ರಯ್ಯ, ಕಲ್ಮನೆ ಗ್ರಾಮದ ಪವನ್, ಚಂದ್ರೇಗೌಡ, ರವಿಕುಮಾರ್, ಶಿವಪ್ರಸಾದ್, ಸಲಾವುದ್ದೀನ್, ರಕ್ಷಿತ್ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಅಹವಾಲು ಸಲ್ಲಿಸಿದರು. ಹೆಚ್ಚಾಗಿ ಒತ್ತುವರಿ ಸಮಸ್ಯೆ, ಅರಣ್ಯ ಸಮಸ್ಯೆ, ಕಾಡು ಪ್ರಾಣಿಗಳ ಹಾವಳಿ, ರಸ್ತೆ ಸಮಸ್ಯೆ, ನಿವೇಶನ ಸಮಸ್ಯೆ ಬಗ್ಗೆ ಅರ್ಜಿಗಳು ಸಲ್ಲಿಕೆಯಾದವು.
ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಮಾಜಿ ಸಚಿವೆ ಮೋಟಮ್ಮ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಬಿ.ಶಂಕರ್, ಎಸ್ಪಿ ಜಿತೇಂದ್ರ ಕುಮಾರ್ ದಯಾಮಾ, ಡಿಸಿಎಫ್ ಬೋರೇಗೌಡ, ಕೊಪ್ಪ ಡಿಸಿಎಫ್ ಶಿವಶಂಕರ್, ಎಸಿಎಫ್ ಕುಲದೀಪ್ ಸಿಂಗ್ ಮೀನಾ, ಗುರುರಾಜ್ ಸಿಂಗ್, ತಹಸಿಲ್ದಾರ್ ಎಸ್.ಅಶ್ವಿನಿ, ಇಒ ದಯಾವತಿ ಇತರರಿದ್ದರು.
ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಮರಗಳು ಹೆಚ್ಚಾಗಿದ್ದರೆ ಅದು ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು ಅಧಿಕಾರಿಗಳು ಹೇಳುವುದು ಸರಿಯಲ್ಲ. ಮರವಿದ್ದ ಜಾಗ ಹಾಗೂ ಡಿಮ್ಡ್ ಕೂಡ ಅರಣ್ಯ ಇಲಾಖೆಗೆ ಸೇರಿಲ್ಲ ಎಂದು ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಮೀಸಲು ಅರಣ್ಯ ಜಾಗ ಮಾತ್ರ ಅರಣ್ಯ ಇಲಾಖೆಗೆ ಸೇರಿದೆ ಇತರೆ ಜಾಗವನ್ನು ಅರಣ್ಯ ಇಲಾಖೆ ಕಬಳಿಸಿಕೊಳ್ಳುವ ಪ್ರಯತ್ನ ಮಾಡಬಾರದು. ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಗೆ ಸೇರಿದ ಪ್ರಕರಣಗಳ ಅಹವಾಲು ಸಾರ್ವಜನಿಕರಿಂದ ಹೆಚ್ಚಾಗಿ ಸಲ್ಲಿಕೆಯಾಗುತ್ತಿದೆ. ಒತ್ತುವರಿ ಸಮಸ್ಯೆಗೆ ಪರಿಹಾರ ಕಲ್ಪಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.
ನಾನು ಶಾಸಕಿಯಾಗಿ ಆಯ್ಕೆಯಾದ ನಂತರ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ ನಡೆಸಲಾಗಿದೆ. ಅಲ್ಲಿ ಜನರಿಂದ ಸಲ್ಲಿಕೆಯಾದ ಅಹವಾಲುಗಳಿಗೆ ಪರಿಹಾರ ಕಲ್ಪಿಸುವ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು. ಜನರ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ನನ್ನ ಕರ್ತವ್ಯ. ಅಧಿಕಾರಿಗಳು ಜನರ ಸೇವೆಯಲ್ಲಿ ತೊಡಗ ಬೇಕು. ಅರ್ಜಿ ಹಿಡಿದು ಬರುವ ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಬೇಕು. ಜನರ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಸಹನೆ ಕಳೆದುಕೊಳ್ಳುತ್ತಾರೆ. ಜನರಿಗೆ ತೃಪ್ತಿಯಾಗುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗುವ ಅರ್ಜಿಯನ್ನು ಶೀಘ್ರ ಇತ್ಯರ್ಥಪಡಿಸಲು ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಸೂಚಿಸಿದರು.