ವಿಶ್ವ ಯುವ ಕೌಶಲ್ಯ ದಿನಾಚರಣೆ ಅಂಗವಾಗಿ ಬಾಳೆಹೊನ್ನೂರಿನ ಜೇಸಿಐ ಸಂಸ್ಥೆಯಿಂದ ಶೃಜಿತ್ ಹುಯಿಗೆರೆ, ಮಂಜುನಾಥ್ ತುಪ್ಪೂರು ಅವರನ್ನು ಸನ್ಮಾನಿಸಲಾಯಿತು.
ಬಾಳೆಹೊನ್ನೂರು: ಇಂದಿನ ಯುವ ಜನರು ವಿವಿಧ ವೃತ್ತಿ ಕೌಶಲ್ಯಗಳೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರ ಡಾ.ನವೀನ್ ಲಾಯ್ಡ ಮಿಸ್ಕಿತ್ ಹೇಳಿದರು.
ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಆಯೋಜಿಸಿದ್ದ ವಿಶ್ವ ಯುವ ಕೌಶಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನರಿಗೆ ಹೊಸ ತಂತ್ರಜ್ಞಾನಗಳು, ವಿವಿಧ ಕೌಶಲ್ಯತೆಗಳು ಮತ್ತು ಡಿಜಿಟಲ್ ಜ್ಞಾನ ಅತ್ಯವಶ್ಯಕವಾಗಿದೆ. ಹೊಸ ತಂತ್ರಜ್ಞಾನ, ಕೌಶಲ್ಯಗಳನ್ನು ಅಳವಡಿಸಿಕೊಂಡಲ್ಲಿ ಅಭಿವೃದ್ಧಿ ಜತೆಗೆ ಆರ್ಥಿಕವಾಗಿ ಸದೃಢತೆ, ಜೀವನ ಭದ್ರತೆ ದೊರೆಯಲಿದೆ ಎಂದರು.
ಯುವಜನರನ್ನು ಉದ್ಯೋಗ, ಯೋಗ್ಯ ಕೆಲಸ ಮತ್ತು ಉದ್ಯಮಶೀಲತೆಗೆ ಅಗತ್ಯವಿರುವ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಮಹತ್ವವನ್ನು ಸಾರಲು ಯುನೈಟೆಡ್ ನೇಷನ್ ಜನರಲ್ ಅಸ್ಲೆಂಬಿ 2014ರಲ್ಲಿ ವಿಶ್ವ ಯುವ ಕೌಶಲ್ಯದಿನ ಘೋಷಿಸಿತು. ಯುವಕರಿಗೆ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಅವಕಾಶಗಳನ್ನು ಒದಗಿಸುವುದು ಇದರ ಮುಖ್ಯ ಗುರಿಯಾಗಿದೆ. ಇಂದಿನ ಯುವ ಪೀಳಿಗೆಯ ಸಂಪೂರ್ಣ ಸಾಮರ್ಥ್ಯವನ್ನು ಬಹಿರಂಗಗೊಳಿಸಲು, ಸಮಗ್ರ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಯಲ್ಲಿ ಬೃಹತ್ ಹೂಡಿಕೆ ಅಗತ್ಯವಿದ್ದು, ಯೋಗ್ಯ ಉದ್ಯೋಗಗಳು ಮತ್ತು ಸುಸ್ಥಿರವಾದ ಜೀವನೋಪಾಯ ಸೃಷ್ಟಿಸಲು ಕೌಶಲ್ಯ ದಿನ ಪೂರಕವಾಗಿದೆ ಎಂದರು.
ಜೇಸಿಐ ಅಧ್ಯಕ್ಷ ಸನತ್ ಶೆಟ್ಟಿ ಮಾತನಾಡಿ, ಇಂದಿನ ಕೆಲಸದ ಪ್ರಪಂಚವು ವೇಗವಾಗಿ ಬದಲಾಗುತ್ತಿದ್ದು, ಕೃತಕ ಬುದ್ಧಿಮತ್ತೆ, ಹಸಿರು ಪರಿವರ್ತನೆ ಮತ್ತು ಬೆಳೆಯುತ್ತಿರುವ ಸಾಮಾಜಿಕ ಸಂಕೀರ್ಣತೆಯು ನಾವು ಸಮಾಜದಲ್ಲಿ ಕಲಿಯುವ, ಕೆಲಸ ಮಾಡುವ ಮತ್ತು ಭಾಗವಹಿಸುವ ವಿಧಾನವನ್ನು ಪರಿವರ್ತಿಸುತ್ತಿದೆ. ಇಂದು ಬದಲಾಗುತ್ತಿರುವ ಭೂ ದೃಶ್ಯದಲ್ಲಿ ಅಭಿವೃದ್ಧಿ ಹೊಂದಲು ಯುವಜನರಿಗೆ ತಾಂತ್ರಿಕ ಕೌಶಲ್ಯಗಳು ಅಗತ್ಯ. ನವೀನ ಮಾದರಿಯ ಯುವ ಕೌಶಲ್ಯ ಕಾರ್ಯಕ್ರಮಗಳ ತುರ್ತುಅಗತ್ಯ ಇಂದಿನ ದಿನಮಾನಕ್ಕೆ ಎತ್ತಿ ತೋರಿಸುತ್ತಿದೆ ಎಂದರು.
ಯುವ ಕೌಶಲ್ಯ ದಿನದ ಅಂಗವಾಗಿ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿರುವ ಎಚ್.ಟಿ.ಶೃಜಿತ್ ಹುಯಿಗೆರೆ, ಅತ್ಯುತ್ತಮ ನಟ, ನಿರ್ಮಾಪಕ ಪ್ರಶಸ್ತಿ ಪಡೆದ ಮಂಜುನಾಥ್ ತುಪ್ಪೂರು ಅವರನ್ನು ಸನ್ಮಾನಿಸಲಾಯಿತು. ಜೇಸಿಐ ನಿಕಟಪೂರ್ವ ಅಧ್ಯಕ್ಷ ಇಬ್ರಾಹಿಂ ಶಾಫಿ, ಕಾರ್ಯದರ್ಶಿ ಎ.ರಂಜಿತ್, ಖಜಾಂಚಿ ವಿ.ರೋಹಿತ್ ಮತ್ತಿತರರು ಇದ್ದರು.