ಅಜ್ಜಂಪುರದಲ್ಲಿ ದಿವ್ಯ ಗಾನಾಮೃತ ಕಾರ್ಯಕ್ರಮದಲ್ಲಿ ಸಿಸ್ಟರ್ ನಿವೇದಿತಾ ರಾಜ್ ಗಾನಸುಧೆ ಹರಿಸುವ ಮೂಲಕ ಸಾವಿರಾರು ಜನರನ್ನು ಮಂತ್ರಮುಗ್ಧಗೊಳಿಸಿದರು.
ತರೀಕೆರೆ: ಪ್ರಕೃತಿಯ ನಿಯಮದಂತೆ ಭೂಮಿಗೆ ಬಿತ್ತಿದ ಬೀಜ ಸಮೃದ್ಧವಾಗಿ ಬೆಳೆದು ಕೈಸೇರುವುದು ಎಷ್ಟು ಸತ್ಯವೋ? ಹಾಗೆಯೇ ನಾವು ಮಾಡಿದ ಪುಣ್ಯ, ಪಾಪ ಕರ್ಮಗಳು ಜೀವನದುದ್ದಕ್ಕೂ ನಮ್ಮನ್ನು ಒಮ್ಮೆ ರಕ್ಷಿಸಿ ಮತ್ತೊಮ್ಮೆ ಕಾಡಲಿವೆ ಎಂದು ಮೂಡುಗಿಳಿಯಾರ್ ಸರ್ವಕ್ಷೇಮ ಆಸ್ಪತ್ರೆ ಮತ್ತು ಯೋಗ ಬನ ಸಂಶೋಧನಾ ಪ್ರತಿಷ್ಠಾನದ ಮುಖ್ಯಸ್ಥ ಡಾ.ವಿವೇಕ ಉಡುಪ ಹೇಳಿದರು.
ಅಜ್ಜಂಪುರ ಪಟ್ಟಣದ ಶ್ರೀ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ವಿವೇಕ ಜಾಗೃತ ಬಳಗದಿಂದ ಆಯೋಜಿಸಿದ್ದ ದಿವ್ಯ ಗಾನಾಮೃತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ ಬೋಧನೆ ಭಾರತದ ಯುವ ಪೀಳಿಗೆಗೆ ಶಕ್ತಿ, ಚೈತನ್ಯ, ಸ್ಫೂರ್ತಿ ತುಂಬಿದೆ. ಯುವಜನತೆ ಸನಾತನ ಹಿಂದೂ ಧರ್ಮದ ಭವ್ಯ ಪರಂಪರೆ ಮುಂದುವರಿಸಿ ಪ್ರತಿಯೊಬ್ಬರಲ್ಲೂ ಹಿಂದುತ್ವ ಜಾಗೃತಗೊಳಿಸಬೇಕು. ಒತ್ತಡದ ಬದುಕಿನಿಂದ ಮುಕ್ತರಾಗಿ ಜೀವನ ಸುಂದರವಾಗಿಸಿಕೊಳ್ಳಬೇಕು ಎಂದರು.
ಆಧುನಿಕತೆಯ ಮೋಹಕ್ಕೆ ಸಿಲುಕಿರುವ ಯುವಪೀಳಿಗೆ ಮಹಾತ್ಮರ ಜೀವನ ಚರಿತ್ರೆ ತಿಳಿದು ಸಾಗಬೇಕು. ರಾಷ್ಟ್ರಭಕ್ತಿ, ಶ್ರದ್ಧೆ, ತ್ಯಾಗ, ಸೇವಾ ಮನೋಭಾವ ಅಳವಡಿಸಿಕೊಂಡು ಭಾರತೀಯ ಪ್ರಾಚೀನ ಸಂಸ್ಕೃತಿ, ಆಧ್ಯಾತ್ಮಿಕ ಮಹತ್ವವನ್ನು ಪ್ರತಿಯೊಬ್ಬರಿಗೂ ಸಾರಬೇಕು ಎಂದು ಹೇಳಿದರು.
ಸಾಲಿಗ್ರಾಮ ಡಿವೈನ್ ಪಾರ್ಕ್ ಟ್ರಸ್ಟ್‌ನ ಸಿಸ್ಟರ್ ನಿವೇದಿತಾ ರಾಜ್, ತಮ್ಮ ಕಂಠ ಸಿರಿಯಲ್ಲಿ ಸುಶ್ರಾವ್ಯವಾದ ಭಜನೆ, ಗಾನಸುಧೆ ಹರಿಸುವ ಮೂಲಕ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಜನರನ್ನು ಮಂತ್ರಮುಗ್ಧಗೊಳಿಸಿದರು. ಜಗದೀಶ್ ಕುಂದರ್ ಪಕ್ಕ ವಾದ್ಯ ನುಡಿಸಿದರು. ಕುರುಬರಹಳ್ಳಿ ಆಧ್ಯಾತ್ಮಿಕ ಕೇಂದ್ರದ ರಾಮ್ ಗುರೂಜೀ, ಪ್ರಮುಖರಾದ ಡಾ. ವಾದಿರಾಜ್, ಡಾ. ಅನಂತ ಪದ್ಮನಾಭ್, ಜಿಪಂ ಮಾಜಿ ಸದಸ್ಯ ಎಂ.ಕೃಷ್ಣಮೂರ್ತಿ, ಅಜ್ಜಂಪುರ, ಕಡೂರು-ಬೀರೂರು, ತರೀಕೆರೆ, ಚಿಕ್ಕಮಗಳೂರು, ಮೂಡಿಗೆರೆ ವಿವೇಕ ಜಾಗೃತ ಬಳಗಗಳ ಕಾರ್ಯಕರ್ತರು ಇದ್ದರು.