ಕಾಡಾನೆಗಳು ಆಲ್ದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗೇಟ್ ಮುರಿದಿರುವುದು.
ಆಲ್ದೂರು: ಪಟ್ಟಣದಲ್ಲಿ ಭಾನುವಾರ ರಾತ್ರಿ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದರಿಂದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಗೇಟ್ ಮುರಿದು ಒಳ ನುಗ್ಗಿರುವ ಕಾಡಾನೆಗಳು ಸುತ್ತಲಿನ ಹಲವು ಮನೆಗಳ ಗೇಟ್‌ಗಳನ್ನು ಧ್ವಂಸಗೊಳಿಸಿ ಅಂಗಳಕ್ಕೆ ನುಗ್ಗಲು ಯತ್ನಿಸಿವೆ. ಕಾಡಾನೆಗಳ ಓಡಾಟದಿಂದ ಗ್ರಾಮಸ್ಥರು ರಾತ್ರಿ ಪೂರ್ತಿ ಭಯದಲ್ಲೇ ಕಳೆದಿದ್ದಾರೆ.
ಪಟ್ಟಣಕ್ಕೆ ಆನೆಗಳು ಲಗ್ಗೆ ಇಟ್ಟಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಮಧ್ಯರಾತ್ರಿಯೇ ಆನೆಗಳನ್ನು ಕಾಡಿನತ್ತ ಅಟ್ಟಲು ಯತ್ನಿಸಿದ್ದಾರೆ. ರಾತ್ರಿ ಪೂರ್ತಿ ಆನೆಗಳ ಚಲನವಲನಗಳನ್ನು ಗಮನಿಸಿದ್ದು ಆನೆಗಳು ಹಾಂದಿ ಭಾಗದತ್ತ ಸಾಗಿವೆ.
ಸೋಮವಾರ ಸಂಜೆ ಹಾಂದಿ ಸಮೀಪದ ಜೆಎಂಜೆ ನರ್ಸರಿ ಹಿಂಭಾಗದ ತೋಟದಲ್ಲಿ ಕಾಡಾನೆಗಳು ಕಂಡು ಬಂದಿದ್ದು ಹಾಂದಿ, ಮಾಚಗೊಂಡನಹಳ್ಳಿ, ಕೆಳಗೂರು, ಮುಳ್ಳುಂಡೆ, ಬಾಳೆಹಳ್ಳಿ, ಹೊಸಪೇಟೆ ಸುತ್ತಮುತ್ತ ಆನೆಗಳು ಸಂಚರಿಸುವ ಸಾಧ್ಯತೆ ಇದ್ದು, ಈ ಭಾಗದ ಜನ ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯಇಲಾಖೆ ತಿಳಿಸಿದೆ.
ಆಲ್ದೂರು ಉಪ ವಲಯ ಅರಣ್ಯಅಧಿಕಾರಿ ಸಂದೀಪ್, ಆನೆ ಕಾರ್ಯಪಡೆ ಸಿಬ್ಬಂದಿ ಇದ್ದರು.