ಶೃಂಗೇರಿಯಲ್ಲಿ ಜನಸಂಚಾರಕ್ಕಾಗಿ ನಿರ್ಮಿಸಿರುವ ಫುಟ್‌ಪಾತ್ ಅನ್ನು ಕಾರುಗಳು ಆಕ್ರಮಿಸಿರುವುದು. 
ಚಿಕ್ಕಮಗಳೂರು

ಶೃಂಗೇರಿಯಲ್ಲಿ ಅಂಗಡಿಗಳ ಗ್ರಾಹಕರಿಗೆ ವಾಹನಗಳೇ ಅಡ್ಡಿ

ಶೃಂಗೇರಿ: ಪಟ್ಟಣದ ಮುಖ್ಯರಸ್ತೆ ಆಗಿರುವ ಭಾರತೀಬೀದಿ ವ್ಯಾಪಾರ ವಹಿವಾಟುಗಳಿಂದ ಸದಾ ಸಂಚಾರ ದಟ್ಟಣೆ ಇರುವ ಬೀದಿಯಾಗಿದೆ. ಇಲ್ಲಿ ಕೆಲವರು ಅಂಗಡಿಗಳ ಮುಂದೆ ಬಹಳಷ್ಟು ನಾಲ್ಕುಚಕ್ರದ ವಾಹನಗಳನ್ನು ನಿಲ್ಲಿಸಿ ತೆರಳುವುದರಿಂದ ವ್ಯಾಪಾರ, ಖರೀದಿಗೆ ಆಗಮಿಸುವ ಗ್ರಾಹಕರಿಗೆ ಬಹಳಷ್ಟು ಸಮಸ್ಯೆ ಉಂಟಾಗುತ್ತಿದೆ.
ರಸ್ತೆ ಇಕ್ಕೆಲಗಳಲ್ಲಿ ವಾಹನ ನಿಲುಗಡೆಗಾಗಿ ಹಾಕಲಾದ ಸೂಚನಾಫಲಕಗಳು, ಬಸ್‌ನಿಲ್ದಾಣದ ನಿಲುಗಡೆಯ ನಾಮಫಲಕ ಒಂದು ರೀತಿಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದರೆ, ಮತ್ತೊಂದೆಡೆ ಅಂಗಡಿ-ಮುಂಗಟ್ಟುಗಳ ಮುಂದೆ ರಾಜಾರೋಷವಾಗಿ ಕಾರುಗಳನ್ನು ನಿಲ್ಲಿಸುವವರು, ಮತ್ತೆ ಕಾರು ತೆಗೆಯುವುದು ಅವರ ಎಲ್ಲ ಕೆಲಸ ಕಾರ್ಯಗಳು ಮುಗಿದ ಬಹಳಷ್ಟು ಸಮಯದ ನಂತರ. ಇದರಿಂದ ವ್ಯಾಪಾರ ಮಾಡಲು ಅಂಗಡಿಗೆ ಬರುವ ಗ್ರಾಹಕರು ನಿಲುಗಡೆಯಾದ ವಾಹನಗಳನ್ನು ದಾಟಿ ಬರಲು ಕೆಲವೊಮ್ಮೆ ಹರಸಾಹಸಪಡಬೇಕಾದ ಸ್ಥಿತಿ ಕಂಡುಬರುತ್ತಿದೆ.
ಫುಟ್‌ಪಾತ್‌ಗಳಲ್ಲಿ ಪ್ರತಿನಿತ್ಯ ಕಾರುಗಳನ್ನು ನಿಲ್ಲಿಸಲಾಗುತ್ತಿದೆ. ಸಮೀಪವೇ ಪೊಲೀಸ್ ಠಾಣೆ ಇದ್ದರೂ, ವ್ಯಾಪಾರಸ್ಥರು, ಪಾದಚಾರಿಗಳು ಪೊಲೀಸ್ ಇಲಾಖೆ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ. ವಾಹನಗಳನ್ನು ಫುಟ್‌ಪಾತ್‌ನಲ್ಲಿ ನಿಲ್ಲಿಸುವುದು ಸಾಮಾನ್ಯದಂತಾಗಿದೆ.
ಪಟ್ಟಣದ ಫುಟ್‌ಪಾತ್‌ಗಳು ಪ್ರಸ್ತುತ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಅದನ್ನು ಸುಸ್ಥಿತಿಗೆ ತರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.