ಚಿಕ್ಕಮಗಳೂರಿನ ಹಳೇಉಪ್ಪಳ್ಳಿಯ ಶ್ರೀವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣಮಾಸ ೨ನೆಯ ಮಂಗಳವಾರ ಸಂಜೆ ಆಯೋಜಿಸಿದ್ದ ‘ಏಕಾದಶ ರುದ್ರದರ್ಶನ’ ಸಮಾರೋಪ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಶ್ರೀ ದೇವಿ ಗುರುಕುಲದ ಸಂಸ್ಥಾಪಕ ವೇದಬ್ರಹ್ಮ ವಿದ್ವಾನ್ ಡಾ.ದಯಾನಂದಮೂರ್ತಿ ಶಾಸ್ತ್ರಿಅವರನ್ನು ಗೌರವಿಸಲಾಯಿತು. ಪ್ರಭುಲಿಂಗ ಶಾಸ್ತ್ರಿ, ಸಿ.ಬಿ.ನಂದೀಶ್, ದೇವಾನಂದ, ನಂದಕುಮಾರ್, ಪ್ರಕಾಶ್, ಲಿಖಿತ್, ನಂಜುಂಡಪ್ಪ ಮತ್ತಿತರರಿದ್ದರು.
ಚಿಕ್ಕಮಗಳೂರು: ಶ್ರೀವೀರಭದ್ರಸ್ವಾಮಿ ಶಿಷ್ಟ ಪರಿಪಾಲಕ ದುಷ್ಟ ನಿಗ್ರಹಕ ಎಂದು ಶ್ರೀ ದೇವಿ ಗುರುಕುಲದ ಸಂಸ್ಥಾಪಕ ವೇದಬ್ರಹ್ಮ ವಿದ್ವಾನ್ ಡಾ.ದಯಾನಂದಮೂರ್ತಿ ಶಾಸ್ತ್ರಿ ನುಡಿದರು.
ನಗರದ ಹಳೇಉಪ್ಪಳ್ಳಿಯ ಶ್ರೀವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣಮಾಸ ೨ನೆಯ ಮಂಗಳವಾರ ಸಂಜೆ ಆಯೋಜಿಸಿದ್ದ ‘ಏಕಾದಶ ರುದ್ರದರ್ಶನ’ ಸಮಾರೋಪ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಗೌರವಸ್ವೀಕರಿಸಿ ಮಾತನಾಡಿದರು.
ಶ್ರೀವೀರಭದ್ರಸ್ವಾಮಿ ಜಾತ್ಯಾತೀತವಾಗಿ ಎಲ್ಲ ಸನಾತನಿಗಳಿಂದ ಪೂಜಿಸಲ್ಪಡುವ ಆರಾಧ್ಯ ದೈವ. ಶಿವನ ಅಂಶವಾಗಿರುವ ಸ್ವಾಮಿ ರುದ್ರರೂಪತಾಳಿ ದುಷ್ಟರ ಧ್ವಂಸ ಮಾಡುವ ದೈವ ಎಂಬ ಪರಿಕಲ್ಪನೆ ಜನಜನಿತವಾಗಿದೆ. ಪರಮೇಶ್ವರನ ಅಂಗರಕ್ಷಕರಲ್ಲಿ ಪ್ರಥಮಸ್ಥಾನ ಹೊಂದಿದ್ದು ಭೂಲೋಕದಲ್ಲಿ ಜನರ ಧಾರ್ಮಿಕ, ಸಾಂಸ್ಕೃತಿಕ ನಾಯಕನಾಗಿ ವೀರಭದ್ರಸ್ವಾಮಿ ಪೂಜಿಸಲ್ಪಡುತ್ತಿದ್ದಾರೆ ಎಂದರು.
ಸತಿ ದೇವಿಯ ತಂದೆ ದಕ್ಷಬ್ರಹ್ಮ ಮಹಾಯಾಗ ಮಾಡುವಾಗ ತನ್ನ ಸ್ವಂತ ಅಳಿಯ ಶಿವನನ್ನು ಕಡೆಗಣಿಸಿದ್ದು, ಆಹ್ವಾನ ಇಲ್ಲದಿದ್ದರೂ ಪತಿಯ ಪ್ರೀತಿಯ ಆಗ್ರಹಕ್ಕೆ ಮಾವ ನಡೆಸುವ ಯಜ್ಞಕ್ಕೆ ಆಗಮಿಸಿದ ಪರಶಿವನನ್ನು ದಕ್ಷಬ್ರಹ್ಮ ಅಪಮಾನಿಸುತ್ತಾನೆ. ಸತಿ ನೊಂದು ಯಜ್ಞಕುಂಡಕ್ಕೆ ಆಹುತಿಯಾದ ಸಂದರ್ಭದಲ್ಲಿ ಶಿವನ ಗಣಂಗಳಲ್ಲಿ ಪ್ರಮುಖನಾದ ವೀರಭದ್ರಸ್ವಾಮಿಯ ಅವತಾರವಾಗುತ್ತದೆ. ಯಜ್ಞವವನ್ನು ಧ್ವಂಸಗೊಳಿಸುವ ಮೂಲಕ ಕೆಟ್ಟ ಸಂಗತಿಗಳನ್ನು ವಿರೋಧಿಸಿ ಸಜ್ಜನರನ್ನು ಕಾಪಾಡುವ ಭರವಸೆ ನೀಡುವ ದೈವವಾಗಿ ವೀರಭದ್ರಸ್ವಾಮಿ ಪೂಜಿಸಲ್ಪಡುತ್ತಿದ್ದಾನೆ ಎಂದು ಮಾಹಿತಿ ನೀಡಿದರು.
ಶ್ರೀ ದೇವಿ ಗುರುಕುಲದ ಮಹಾಪೋಷಕ ಪ್ರಭುಲಿಂಗಶಾಸ್ತ್ರಿ ಮಾತನಾಡಿ, ದಶಕಗಳಿಂದ ಗುರುಕುಲದಲ್ಲಿ ಶ್ರಾವಣ ವಿಶೇಷ ಕಾರ್ಯಕ್ರಮ ಗುರುಗಳ ನೇತೃತ್ವದಲ್ಲಿ ನಡೆದುಕೊಂಡು ಬಂದಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಮುಂದುವರೆದ ಭಾಗವಾಗಿ ಈ ಬಾರಿ ನಗರದ ಸುತ್ತಮುತ್ತಲಿನ ೧೧ಶ್ರೀವೀರಭದ್ರಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆಸಲ್ಲಿಸಿ ಶ್ರೀರುದ್ರ ಪಾರಾಯಣ ಮತ್ತು ಶಿವಕೀರ್ತನೆ, ಭಜನೆ ನಡೆಸಲಾಗಿದೆ ಎಂದರು.
ಡಸ್ವಾಮಿ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಶ್ರೀದೇವಿಗುರುಕುಲ ಲೋಕಹಿತವನ್ನು ಬಯಸುತ್ತದೆ. ಹಳೆಉಪ್ಪಳ್ಳಿ ದೇವಾಲಯ ಜೀರ್ಣೋದ್ಧಾರಗೊಂಡಿದ್ದು ಇಲ್ಲೂ ರುದ್ರಪಠಣ ಊರಿಗೆ ಶೋಭೆ ತಂದಿದೆ ಎಂದರು.
ತಾಲೂಕು ವೀರಶೈವ ಮಹಾಸಭಾ ಕಾರ್ಯದರ್ಶಿ ಸಿ.ಬಿ.ನಂದೀಶ್ ಸ್ವಾಗತಿಸಿ, ಪ್ರಾಸ್ತಾವಿಸಿದರು. ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಖಜಾಂಚಿ ದೇವಾನಂದ ವಂದಿಸಿದರು. ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ನಂದಕುಮಾರ್, ಉಪಾಧ್ಯಕ್ಷ ಪ್ರಕಾಶ್, ರೋಟರಿ ನಿಕಟಪೂರ್ವ ಅಧ್ಯಕ್ಷ ಲಿಖಿತ್, ಮುಖಂಡರಾದ ನಂಜುಂಡಪ್ಪ, ಚಂದ್ರಶೇಖರ್, ದೇವೇಗೌಡ, ರವಿ ನೇತೃತ್ವದಲ್ಲಿ ,ಗುರುವಂದನೆ ಸಲ್ಲಿಸಲಾಯಿತು.. ಚಂದನಾ, ಸವಿತಾ, ಚಂದ್ರಮ್ಮ, ಜಯಶ್ರೀ, ಉಷಾ, ಮಂಜುಳಾ ನೇತೃತ್ವದ ಸ್ಥಳೀಯ ಭಜನಾಮಂಡಳಿ ಸದಸ್ಯರು ಸಾಮೂಹಿಕ ಭಜನೆ ನಡೆಸಿದರು.