ಎಂ.ಕೆ.ಪ್ರಾಣೇಶ್ 
ಚಿಕ್ಕಮಗಳೂರು

ವೈಫಲ್ಯ ಮರೆಮಾಚಲು ಪರಿಷತ್ ಚುನಾವಣೆ ಬಳಕೆ

ಜಿ.ಹೆಚ್. ಧನ್ಯಕುಮಾರ್
ಮೂಡಿಗೆರೆ: ರಾಜ್ಯ ಸರ್ಕಾರ ತನ್ನ ಆಡಳಿತ ವೈಫಲ್ಯ ಮರೆಮಾಚಲು ವಿಧಾನ ಪರಿಷತ್ ಚುನಾವಣೆ ಗೆಲುವಿನ ಬಗ್ಗೆ ಅಗತ್ಯಕ್ಕಿಂತ ಹೆಚ್ಚಾಗಿ ಹೆಮ್ಮೆ ಪಡುವ ಜತೆಗೆ ಕಾಂಗ್ರೆಸ್ ತನ್ನ ಹೈಕಮಾಂಡ್ ಎದುರು ಬೆನ್ನು ತಟ್ಟಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಲೇವಡಿ ಮಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ. ರಸ್ತೆಗಳನ್ನು ಗುಂಡಿಮುಚ್ಚಲು ಆಗದೆ ಜನರಿಂದ ಛೀಮಾರಿಗೊಳದಾಗಿದೆ. ಗ್ಯಾರಂಟಿ ಯೋಜನೆ ಪರಮಾರ್ಷೆ ನೆಪದಲ್ಲಿ ಯೋಜನೆ ಸ್ಥಗಿತಗೊಳಿಸಲಾಗಿದೆ. ಕಳೆದ 4 ತಿಂಗಳಿಂದ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಗಳ ಪಿಂಚಣಿ ತಡೆಹಿಡಿಯಲಾಗಿದೆ. ಇದರಿಂದ ಫಲಾನುಭವಿಗಳು ಕಂಗಾಲಾಗಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸರ್ಕಾರದ ವೈಫಲ್ಯವನ್ನು ಜನರಿಂದ ಮುಚ್ಚಿಡಲು ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಕೆಲವು ಸದಸ್ಯರ ಅಡ್ಡ ಮತದಾನದ ಲಾಭ ಪಡೆದಿದ್ದನ್ನು ದೊಡ್ಡ ಸಾಧನೆ ಎಂಬಂತೆ ತೋರಿಸಿಕೊಳ್ಳುತಿದೆ. ಅಧಿಕಾರ ಶಾಶ್ವತವಲ್ಲ ಅಧಿಕಾರದ ಪ್ರಭಾವದಿಂದ ಕೆಲವರು ಸುತ್ತಮುತ್ತ ಇರುವುದು ಸಹಜ ಆದರೆ ಅದು ಶಾಶ್ವತವಾಗಿ ಉಳಿಯುವುದಿಲ್ಲ. ಕಾಂಗ್ರೆಸ್ ಹಿಂದಿನಿಂದಲೂ ವಿರೋಧ ಪಕ್ಷದ ಸದಸ್ಯರನ್ನು ಹಣ ಅಧಿಕಾರ ಮತ್ತು ಪ್ರಭಾವದ ಮೂಲಕ ಸೆಳೆಯುವ ರಾಜಕಾರಣ ನಡೆಸಿದೆ. ಜನಪ್ರತಿನಿಧಿಗಳಿಗೆ ಸಮರ್ಪಕವಾಗಿ ಕ್ಷೇತ್ರಾಭಿವೃದ್ಧಿ ಅನುದಾನ ದೊರೆಯುತ್ತಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಲ್ಲಿಯೂ ಸರ್ಕಾರ ವಿಫಲವಾಗಿದೆ. ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯನ್ನು ವಿರೋಧ ಪಕ್ಷದ ಕಾರ್ಯಕರ್ತರ ವಿರುದ್ಧ ಬಳಸಲಾಗುತ್ತಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ಕಳವಳಕಾರಿಯಾಗಿದೆ. ಬರ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ತಯಾರಿ ಮಾಡಿಕೊಂಡಿಲ್ಲ. ಪ.ಜಾತಿ ಮತ್ತು ಪಂಗಡಗಳ ಅನುದಾನ ದುರ್ಬಳಕೆಯಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಅಧಿಕಾರಾವಧಿ ಮುಗಿಯುವ ಮುನ್ನ ಜನರು ನೆನಪಿಟ್ಟುಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ವಿಧಾನ ಪರಿಷತ್ ಚುನಾವಣೆ ಸಾರ್ವಜನಿಕ ಚುನಾವಣೆ ಅಲ್ಲ. ರಾಜ್ಯದಲ್ಲಿ ಇನ್ನೂ 2 ವರ್ಷಗಳಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗಬಹುದು. ಕಾಂಗ್ರೆಸ್ ನಾಯಕರು ಮಾತ್ರ ನಾವು ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯುತ್ತೆವೆ ಎಂಬ ಮೊಂಡುವಾದದಲ್ಲಿ ಮುಳುಗಿದ್ದಾರೆ. ಪ್ರಯೋಜನಕ್ಕಿಲ್ಲದ ಇಂತಹ ಸರ್ಕಾರದಿಂದ ಜನ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು.