ಮೂಡಿಗೆರೆ ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿದರು.
ಮೂಡಿಗೆರೆ: ಕಳಸ, ಮೂಡಿಗೆರೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ, ಗುಂಡಿ ಬಿದ್ದ ರಸ್ತೆಗಳು, ಕೈ ಕೊಡುತ್ತಿರುವ ವಿದ್ಯುತ್,ರಸ್ತೆ ಬದಿಯಲ್ಲಿ ಒಣಗಿದ ಮರ ತೆರವುಗೊಳಿಸದ ಅರಣ್ಯ ಇಲಾಖೆ, ನಿಷ್ಕ್ರಿಯಗೊಂಡ ಮೂಡಿಗೆರೆ ಪಪಂ, ಕಾರ್ಯನಿರ್ವಹಿಸದ ಮಳೆ ಮಾಪನ ಕೇಂದ್ರ, ದುರಸ್ತಿಯಾದ ಶಾಲಾ ಕಟ್ಟಡ, ಕಸದ ರಾಶಿಯ ಸಮಸ್ಯೆಗಳ ಬಗ್ಗೆ ಸೋಮವಾರ ಶಾಸಕಿ ನಯನಾ ಮೋಟಮ್ಮ ಅಧ್ಯಕ್ಷತೆಯಲ್ಲಿ ಮೂಡಿಗೆರೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಮೂಡಿಗೆರೆ ಮತ್ತು ಕಳಸ ತಾಲೂಕಿನ ಪ್ರಾಥಮಿಕ ವೈದ್ಯಾಧಿಕಾರಿಗಳ ಕೊರತೆಯಿದೆ. ಗ್ರಾಮೀಣ ಭಾಗದಲ್ಲಿ ಹಾವು ಕಚ್ಚಿದಾಗ ತಾಲೂಕು ಆಸ್ಪತ್ರೆಗೆ ಕಳಿಸಲಾಗುತ್ತದೆ. ಫಿಜಿಷಿಯನ್ ವಿಭಾಗದ ವೈದ್ಯರಿದ್ದರೆ ಮಾತ್ರ ಹಾವು ಕಡಿತಕ್ಕೆ ಚಿಕಿತ್ಸೆ ನೀಡಬಹುದು. ಕಳಸ ತಾಲೂಕು ಆಸ್ಪತ್ರೆ 108 ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿದೆ. ಮಲೆನಾಡು ಭಾಗದಲ್ಲಿ 20 ರಿಂದ 25 ಸಾವಿರ ಕಿ.ಮೀ ಸಂಚರಿಸಲು ಮಾತ್ರ ಟೈಯರ್‌ಗಳು ಸಾಮರ್ಥ್ಯ ಹೊಂದಿದೆ. ಅದರೆ ಇಲಾಖೆ ನಿಯಮದ ಪ್ರಕಾರ 40 ಸಾವಿರ ಕಿ.ಮೀ ಸಂಚರಿಸಬೇಕು ಎಂದು 108 ಆಂಬುಲೆನ್ಸ್ ಏಜೆನ್ಸಿ ಅವರು ಹೇಳುತ್ತಾರೆ. 4 ಟೈಯರ್ ಸಂಪೂರ್ಣ ಸವೆದಿರುವುದರಿಂದ ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಹರೀಶ್ ಬಾಬು ಸಭೆ ಮಾಹಿತಿ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸದ್ಯದಲ್ಲಿ ವೈದ್ಯಾಧಿಕಾರಿಗಳನ್ನು ನೇಮಕ ಸೇರಿದಂತೆ ಎಲ್ಲ ಸಮಸ್ಯೆ ಪರಿಹಾರಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು. ಸಬ್ಬೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ನಾಯಿ ಕಳೆಬರ ಬಿದ್ದಿರುವ ಬಗ್ಗೆ ಶಾಸಕಿ ನಯನಾ ಮೋಟಮ್ಮ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಗೀತಾಂಜಲಿಗೆ ಪ್ರಶ್ನಿಸಿದರು.
ನದಿಯಿಂದ ನೇರವಾಗಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ನದಿಯಲ್ಲಿ ಸತ್ತ ನಾಯಿ ತೇಲಿಕೊಂಡು ಬಂದಿದೆ ಎಂದರು. ಇದರಿಂದ ಅಕ್ರೋಶಗೊಂಡ ಶಾಸಕರು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಜೆಜೆಎಂ ಯೋಜನೆ ಕಾಮಗಾರಿ ಮುಗಿಸಲು 2ತಿಂಗಳ ಹಿಂದೆ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೂ ಅಧಿಕಾರಿಗಳು ಇದುವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.