: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಎಂದು ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಆಯುಕ್ತ ಗುರುದತ್ ಹೆಗಡೆಗೆ ಮನವಿ ಸಲ್ಲಿಸಿದರು. ಮೇಲ್ವಿನ್ ಲಸ್ರಾದೋ, ಬಿ.ಎ.ಉಮ್ಮರ್ ಇದ್ದರು. 
ಚಿಕ್ಕಮಗಳೂರು

ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ

 ಮೂಡಿಗೆರೆ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ವರ್ಗಾವಣೆಗೊಂಡಿರುವ ವೈದ್ಯಾಧಿಕಾರಿ ಇಕ್ಲಾಸ್ ಅಹ್ಮದ್ ಅವರನ್ನು ಮುಂದುವರಿಸಬೇಕು ಎಂದು ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೇಲ್ವಿನ್ ಲಸ್ರಾದೋ ಹಾಗೂ ಬಣಕಲ್ ಹೋಬಳಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಎ.ಉಮರ್ ಅವರು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಮತ್ತು ಆರೋಗ್ಯ ಇಲಾಖೆ ಆಯುಕ್ತ ಗುರುದತ್ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳೇ ಇಲ್ಲ. ಇರುವ ಒಬ್ಬ ಉತ್ತಮ ವೈದ್ಯಾಧಿಕಾರಿ ಇಕ್ಲಾಸ್ ಅಹ್ಮದ್ ಅವರನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ವೈದ್ಯಾಧಿಕಾರಿಯ ವರ್ಗಾವಣೆ ರದ್ದುಪಡಿಸಬೇಕು. ಅವರನ್ನು ಅದೇ ಸ್ಥಳದಲ್ಲಿ ಕರ್ತವ್ಯದಲ್ಲಿ ಮುಂದುವರಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5 ವೈದ್ಯಾಧಿಕಾರಿಗಳನ್ನು ಮತ್ತು ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿದರು.
ಸಣ್ಣಪುಟ್ಟ ಕಾಯಿಲೆಗಳಿಗೂ ಮಂಗಳೂರು, ಹಾಸನ, ಬೆಂಗಳೂರು ಮತ್ತಿತರ ಕಡೆ ದೊಡ್ಡ ಆಸ್ಪತ್ರೆಗೆ ಹೋಗಬೇಕಾಗಿದೆ. ಬಣಕಲ್ ಪಟ್ಟಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆಯಿಲ್ಲ. ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ಸಕಲ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. 
ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಕನಿಷ್ಠ 20 ಹಾಸಿಗೆಗಳ ಆಸ್ಪತ್ರೆಯನ್ನು ಸ್ಥಾಪಿಸಬೇಕು. ಬಣಕಲ್ ಕೇಂದ್ರ ಸ್ಥಾನದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಅಗತ್ಯ ವೈದ್ಯಕೀಯ ಸೌಲಭ್ಯ, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ನೇಮಿಸಿದರೆ ರೋಗಿಗಳಿಗೆ ವರದಾನವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.