ಕಡೂರು: ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಅಗತ್ಯವಿದ್ದವರಿಗೆ ರಕ್ತ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ 17 ವರ್ಷಗಳ ಹಿಂದೆ ಸ್ಥಾಪಿಸಿದ ರಕ್ತ ನಿಧಿ ಠೇವಣಿಯಲ್ಲಿ ಸುಮಾರು 12 ಲಕ್ಷ ರೂ.ಹಣ ಬಳಕೆಯಾಗದೆ ಉಳಿದಿದ್ದು, ಉಳಿತಾಯ ಖಾತೆಯು ಸ್ಥಗಿತಗೊಂಡಿದೆ.
ಪ್ರಮುಖ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವ ಕಡೂರು ಪಟ್ಟಣದಲ್ಲಿ ಆಗಾಗ ಸಂಭವಿಸುವ ಅಪಘಾತಗಳಿಂದ ರಕ್ತದ ತುರ್ತು ಅಗತ್ಯ ಬಂದಾಗ ಶಿವಮೊಗ್ಗ ಅಥವಾ ಚಿಕ್ಕಮಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದನ್ನು ಮನಗಂಡು 2004ರಲ್ಲಿ ಅಂದಿನ ತಹಸೀಲ್ದಾರ್ ಆಗಿದ್ದ ಡಾ.ಎಂ.ಡಿ.ಲಕ್ಷ್ಮೀ ನಾರಾಯಣ ಅವರು ರೆಡ್‌ಕ್ರಾಸ್ ರಕ್ತಬ್ಯಾಂಕ್ ಸ್ಥಾಪಿಸಲು ಪ್ರಯತ್ನಿಸಿದರು. ಸಮಾನ ಮನಸ್ಕರು ಮತ್ತು ಆಸಕ್ತರನ್ನು ಸೇರಿಸಿ ರೆಡ್‌ಕ್ರಾಸ್ ಸದಸ್ಯರನ್ನಾಗಿ ಮಾಡಿ, ನೋಂದಣಿ ಮಾಡಿಸಿದರು.
ರಕ್ತ ನಿಧಿ ಸ್ಥಾಪಿಸಲು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದರು. ತಹಸೀಲ್ದಾರ್ ಈ ಸಮಿತಿ ಶಾಶ್ವತ ಅಧ್ಯಕ್ಷರು. ವ್ಯಕ್ತಿ ಬದಲಾದರೂ ಸಮಿತಿಗೆ ತಹಸೀಲ್ದಾರ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ) ಈ ಸಮಿತಿಯ ಹೆಸರಲ್ಲಿ ಕಡೂರು ವೈಶ್ಯ(ಈಗ ಕೊಟಕ್ ಮಹೀಂದ್ರ) ಬ್ಯಾಂಕ್‌ನಲ್ಲಿ ಖಾತೆ ತೆರೆದು ಸಂಗ್ರಹಗೊಂಡ ಸದಸ್ಯತ್ವದ ಮೊತ್ತವನ್ನು ಠೇವಣಿ ಇರಿಸಿದರು. ತಲಾ 200 ರಿಂದ 500 ರೂ. ಸದಸ್ಯತ್ವ ಶುಲ್ಕದಂತೆ ಬಹಳಷ್ಟು ಜನರು ಸದಸ್ಯತ್ವ ಪಡೆದಿದ್ದರು.
ಆದರೆ, ಈ ಯೋಜನೆ ಅನುಷ್ಠಾನಕ್ಕೆ ಬರುವ ಮುನ್ನವೇ ಡಾ.ಎಂ.ಡಿ.ಲಕ್ಷ್ಮೀನಾರಾಯಣಪ್ಪ ಅವರು ಬೇರೆಡೆಗೆ ವರ್ಗಾವಣೆಗೊಂಡರು. ಬಳಿಕ ಬಂದ ತಹಸೀಲ್ದಾರರು ಇದರತ್ತ ಗಮನ ಹರಿಸಲಿಲ್ಲ. ಪರಿಣಾಮ ವೈಶ್ಯ ಬ್ಯಾಂಕ್‌ನಲ್ಲಿದ್ದ ಠೇವಣಿ ಖಾತೆ ಸ್ಥಗಿತಗೊಂಡಿತು. ಸದ್ಯ ಕಡೂರು ವೈಶ್ಯಬ್ಯಾಂಕ್(ಕೊಟಕ್ ಮಹೀಂದ್ರ ಬ್ಯಾಂಕ್) ಖಾತೆ ಸಂಖ್ಯೆ 107010003852ರಲ್ಲಿ ಸುಮಾರು 12 ಲಕ್ಷ ರೂ. ಹಣವಿದ್ದು, ಈ ಖಾತೆ ಬಹುದಿನಗಳಿಂದ ಯಾವುದೇ ವ್ಯವಹಾರ ನಡೆಯದ ಕಾರಣ ಖಾತೆಯು ಸ್ಥಗಿತಗೊಂಡಿದೆ.
ರಕ್ತನಿಧಿ ಠೇವಣಿ ಕುರಿತು ತಹಸೀಲ್ದಾರ್ ಕಚೇರಿಯಲ್ಲಿ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ. ಈ ಹಣ ಬಳಕೆಯಾಗದೆ ಬ್ಯಾಂಕ್‌ನಲ್ಲಿ ಹಾಗೆ ಉಳಿದಿದೆ. ಈ ಹಣದಿಂದ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಂದಿಷ್ಟು ಸೌಕರ್ಯ ಕಲ್ಪಿಸುವ ಅಥವಾ ಸಾರ್ವಜನಿಕ ಆಸ್ಪತ್ರೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸುವ ಅವಕಾಶವಿದೆ. ಪ್ರಸ್ತುತ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಅವರು ಈ ಖಾತೆ ಸಕ್ರಿಯಗೊಳಿಸಿ ರಕ್ತನಿಧಿ ಬಳಕೆಗೆ ಸಮರ್ಪಕ ಕ್ರಮ ಕೈಗೊಳ್ಳಬೇಕಿದೆ.