ಬೀರೂರಿನ ಹೆಬ್ಬಾಗಿಲು ಎನ್‌ಎಚ್ 206 ರಲ್ಲಿ ನಿರ್ಮಿಸುತ್ತಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮುಂದೆ ಬೈಪಾಸ್‌ಗೆ ತಲುಪಲು ವಾಹನಗಳು ತಿರುವುಗಳನ್ನು ಪಡೆಯುತ್ತಿರುವುದು. 
ಚಿಕ್ಕಮಗಳೂರು

ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ಅವೈಜ್ಞಾನಿಕ ರಸ್ತೆ ತಿರುವು

ಬೀರೂರು: ವಾಹನಗಳ ದಟ್ಟಣೆ ನಿಯಂತ್ರಿಸಲು ಪಟ್ಟಣದ ಹೊರ ವಲಯದಲ್ಲಿ ನಿರ್ಮಿಸಿರುವ ಬೈಪಾಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅವೈಜ್ಞಾನಿಕವಾಗಿ ತಿರುವು ನೀಡಿರುವುದರಿಂದ ವಾಹನ ಸವಾರರು ಆತಂಕದಲ್ಲಿ ಸಾಗುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಹಲವಾರು ಪಟ್ಟಣ, ನಗರಗಳು ಹಾದು ಹೋಗುತ್ತದೆ. ವಾಹನಗಳ ದಟ್ಟಣೆ ಹೆಚ್ಚಾದಂತೆ ಟ್ರಾಫಿಕ್ ಸಮಸ್ಯೆ ಕೂಡ ಆರಂಭವಾಗುತ್ತದೆ. ಇದರಿಂದ ಪ್ರತಿನಿತ್ಯ ಅಪಘಾತ, ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಹಾಗಾಗಿ ವಾಹನಗಳ ದಟ್ಟಣೆ ನಿಯಂತ್ರಣಕ್ಕಾಗಿ ಬೈಪಾಸ್ ರಸ್ತೆ ನಿರ್ಮಾಣದಿಂದ ಮಾತ್ರ ಸಾಧ್ಯ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಟ್ಟಣಗಳ ಹೊರ ವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸಿದರೆ ಲಘು ಮತ್ತು ಭಾರೀ ವಾಹನಗಳು ಪಟ್ಟಣ ಪ್ರವೇಶಿಸದೆ ನಗರದ ಹೊರಭಾಗದಲ್ಲಿಯೇ ನಿರ್ಗಮಿಸುತ್ತವೆ. ವಾಹನ ಸವಾರರೂ ಕೂಡ ಸಮಯ ಹಾಗೂ ಇಂಧನ ಕಡಿಮೆಯಾಗುತ್ತದೆ ಎಂದು ಈ ರಸ್ತೆಯಲ್ಲಿ ಸಾಗುತ್ತಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಬೈಪಾಸ್ ಕಾಮಗಾರಿ ನಡೆಯುತ್ತಿದೆ. ಆದರೆ ಬೀರೂರಿನಿಂದ ಕಡೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 206ರಿಂದ ಬೈಪಾಸ್ ರಸ್ತೆಗೆ ತಲುಪಲು ಸರಿಯಾಗಿ ವ್ಯವಸ್ಥೆ ಕಲ್ಪಿಸದಿರುವುದು ಸ್ಥಳೀಯ ವಾಹನ ಸವಾರರಿಗೆ ಗೊಂದಲ ಸೃಷ್ಟಿಯಾಗಿದೆ.
ಬೀರೂರು ಕಡೆಯಿಂದ ಕಡೂರು ಕಡೆಗೆ ತೆರಳು ಸವಾರರು ಎನ್‌ಎಚ್ 206 ರಲ್ಲಿ ನಿರ್ಮಿಸುತ್ತಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ವಾಪಾಸು ಹಿಂದಕ್ಕೆ ತೆರಳಿ ಅಲ್ಲಿಂದ ಹೊಸ ಬ್ರಿಡ್ಜ್‌ನ ಮೂಲಕ ಬಲಕ್ಕೆ ತಿರುಗಿ ಅಲ್ಲಿಂದ ಸರ್ವೀಸ್ ರಸ್ತೆ ಮೂಲಕ ಬೈಪಾಸ್‌ಗೆ ಪ್ರವೇಶ ಪಡೆಯಬೇಕಾಗಿದೆ. ಅಲ್ಲದೆ ಹತ್ತಾರು ಹಂಪ್‌ಗಳು ವಾಹನಗಳಿಗೆ ಕಿರಿಕಿರಿ ಉಂಟು ಮಾಡುತ್ತಿವೆ. ಈ ತಿರುವು ಮತ್ತು ಹಂಪ್‌ಗಳ ಮಧ್ಯೆ ಭಾರೀ ವಾಹನಗಳು ತಿರುಗಲು ಸಾಧ್ಯವಾಗದೇ ಹಿಂದೆ ಮುಂದೆ ಎಡಕ್ಕೆ ಬಲಕ್ಕೆ ತಿರುವು ಪಡೆದು ನಂತರ ಬೈಪಾಸ್ ಹೆದ್ದಾರಿಗೆ ತಲುಪಬೇಕಾಗಿದೆ. ಈ ರೀತಿ ಅವೈಜ್ಞಾನಿಕ ತಿರುವುಗಳನ್ನು ನೀಡಿರುವುದು ವಾಹನ ಸವಾರರಲ್ಲಿ ಗೊಂದಲ ಸೃಷ್ಟಿಸಿದೆ.