ಕಳಸದ ಕುಂಭ ಸಂಭವ ಕುಂಬಾರ ಸಂಘದಲ್ಲಿ ಆಯೋಜಿಸಿದ್ದ ಆಟಿಡೊಂಜಿ ಕುಲಾಲ್ ಗಮ್ಮತ್ ಕಾರ್ಯಕ್ರಮದಲ್ಲಿ ಮಹಿಳೆಯರು ಆಟೋಟ ಸ್ಪರ್ಧೆಯಲ್ಲಿ ಭಾಗಿಯಾಗಿರುವುದು.  
ಚಿಕ್ಕಮಗಳೂರು

ಕುಂಬಾರ ಸಮಾಜ ಒಗ್ಗೂಡಿಸಿ ಸಂಘಟನೆ ಬಲಪಡಿಸಿ

ಕಳಸ: ಹಿಂದುಳಿದ ಸಮುದಾಯಗಳಲ್ಲಿ ಕುಂಬಾರ ಜನಾಂಗ ಅತ್ಯಂತ ಹಿಂದುಳಿದಿದ್ದು, ಹಿಂದುಳಿದಿದ್ದೇವೆ ಎಂದು ಸುಮ್ಮನಿದ್ದರೆ ಪ್ರಗತಿ ಸಾಧ್ಯವಿಲ್ಲ, ಜಾಗೃತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು ಎಂದು ಜಾನಪದ ಪರಿಷತ್‌ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಹಡ್ಲುಗದ್ದೆ ಹೇಳಿದರು.
ಕುಂಭ ಸಂಭವ ಕುಂಬಾರ ಸಂಘ ಆಯೋಜಿಸಿದ್ದ ಆಟಿಡೊಂಜಿ ಕುಲಾಲ್ ಗಮ್ಮತ್ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಚದುರಿಹೋಗಿರುವ ಕುಂಬಾರ ಜನಾಂಗದವರನ್ನು ಒಗ್ಗೂಡಿಸಿ, ಸಂಘಟನೆ ಬಲಪಡಿಸಬೇಕು ಎಂದರು.
ಪ್ಲಾಸ್ಟಿಕ್ ಹಾಗೂ ವಿವಿಧ ಲೋಹದ ವಸ್ತುಗಳ ಆಗಮನದಿಂದ ಮಣ್ಣಿನ ಪರಿಕರ ಮತ್ತು ಮಡಕೆ ಕುಡಿಕೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಮಣ್ಣಿನ ಪಾತ್ರೆಗಳ ಬಳಕೆ ಆರೋಗ್ಯಕ್ಕೆ ಅತ್ಯಂತ ಹಿತಕರ. ಈ ವೈಜ್ಞಾನಿಕ ವಿಚಾರವನ್ನು ಜನರಿಗೆ ತಲುಪಿಸಲು ನಾವು ಮೊದಲು ಮನೆಯಲ್ಲಿ ಮಣ್ಣಿನ ಪಾತ್ರೆಗಳನ್ನು ಬಳಸಲು ಪ್ರಾರಂಭಿಸಬೇಕು. ಮಾನವ ನಾಗರಿಕತೆ ಆರಂಭದಿಂದಲೂ ದ್ರವರೂಪದ ವಸ್ತುವಿಗೆ ನಿರ್ದಿಷ್ಟ ಆಕಾರ ನೀಡಿದ ಹೆಗ್ಗಳಿಕೆ ಕುಂಬಾರ ಸಮುದಾಯಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಸಮುದಾಯದ ಎಲ್ಲ ಮನೆಯವರು ತಮ್ಮ ಮನೆಯಲ್ಲಿ ಆಟಿ ತಿಂಗಳಲ್ಲಿ ಮಾಡುವ ವಿಶೇಷ ಖಾದ್ಯಗಳಾದ ಸೌತೆ ಪಚ್ಚೋಡಿ, ಒಂದೆಲಗ ಚಟ್ನಿ, ಹುರುಳಿ ಚಟ್ನಿ, ತಜಂಕ್ ಪಲ್ಯ, ಕೆಸುಗಸಿ, ಬಟಾಟೆ ಬೋಂಡಾ, ಉದ್ದಿನ ಬೋಂಡಾ, ಕಡ್ಲೆ ಬೇಳೆ ಚಟ್ಟಂಬಡೆ, ಗಂಜಿ, ಅಕ್ಕಿ ಶ್ಯಾವಿಗೆ, ಶ್ಯಾವಿಗೆ ಹಾಲು, ಅಪ್ಪದಡ್ಯೆ, ಹಾಲು ಕಡುಬು, ಹಲಸಿನ ಹಣ್ಣಿನ ಕಡುಬು, ಅರಶಿನ ಎಲೆ ಕಡುಬು, ಕಡ್ಲೆ ಬಲ್ಯಾರ್ ಪಲ್ಯ, ಮೀನು ಚಟ್ನಿ, ಕೋರಿ ರೊಟ್ಟಿ ಸೇರಿದಂತೆ ಸುಮಾರು 30 ಹೆಚ್ಚು ಬಗೆ ಬಗೆಯ ಖಾದ್ಯಗಳು ಗಮನ ಸೆಳೆದವು. ಕುಲಾಲ್ ಜನಾಂಗದವರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಸಂಘದ ಉಪಾಧ್ಯಕ್ಷ ಪೂರ್ಣೇಶ್, ನಿಕಟಪೂರ್ವ ಅಧ್ಯಕ್ಷ ವಾಸುದೇವ, ಕಾರ್ಯದರ್ಶಿ ಸಂತೋಷ್, ಶ್ರೀನಾಥ್, ಮುರುಳಿ, ಸುಜಯ ಸದಾನಂದ, ವಿನುತಾ ಪುಟ್ಟ, ಮೈನಾ ಉಮೇಶ್ ಇದ್ದರು.