ಚಿಕ್ಕಮಗಳೂರು: ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು ಎರಡು ಕಾಡು ಗಿಳಿಗಳನ್ನು ಸಾಕುತ್ತಿದ್ದ ನಗರದ ಟಿಪ್ಪುನಗರದ ಚಾಮುಂಡಿ ಕಾಫಿ ಕ್ಯೂರಿಂಗ್ ಹಿಂಭಾಗದ ರಾಜಸ್ತಾನ ಕುಲ್ಫಿ ರಸ್ತೆಯ ನಿವಾಸಿ ಸುರೇಶ್ ಎಂಬಾತನ ವಿರುದ್ಧ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳವು ಪ್ರಕರಣ ದಾಖಲಿಸಿದೆ.
ಈ ಬಗ್ಗೆ ಸುಳಿವು ಅರಿತ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳವು ಬುಧವಾರ ಈ ದಾಳಿ ನಡೆಸಿದ್ದು, ಸುರೇಶ್ ವಶದಲ್ಲಿದ್ದ ಕಾಡುಗಿಳಿಗಳನ್ನು ಪಂಜರದ ಸಹಿತ ವಶಪಡಿಸಿಕೊಂಡಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ -೧೯೭೨ರ ಆನ್ವಯ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಗಿಳಿಗಳನ್ನು ಸಂರಕ್ಷಣೆಗಾಗಿ ಇಲ್ಲಿನ ಆರ್‌ಎಫ್‌ಒ ಅವರ ಸುಪರ್ದಿಗೆ ನೀಡಲಾಗಿದೆ.
ರಾಜ್ಯ ಸಿಐಡಿ ಅರಣ್ಯ ಘಟಕದ ಪೊಲೀಸ್ ಉಪ ಮಹಾನಿರೀಕ್ಷಕರಾದ ಜಿ.ಸಂಗೀತ, ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಜ್ಜುರು ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪನಿರೀಕ್ಷಕ ಬಾಬುದ್ದೀನ್, ಸಿಬ್ಬಂದಿಗಳಾದ ಕೃಷ್ಣರಾಜು ಅರಸ್, ಕೆ.ಎಸ್.ದಿಲೀಪ್, ಹೆಚ್.ನಟರಾಜ್, ಹಾಲೇಶ್, ಲೋಹಿತ್ ಸಿ.ಎಂ. ಹಾಗೂ ಚಾಲಕ ತಿಮ್ಮಶೆಟ್ಟಿ ಭಾಗವಹಿಸಿದ್ದರು.