ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಎದುರು ಮಗುವಿನ ಪಾಲಕರು ಪ್ರತಿಭಟನೆ ನಡೆಸುತ್ತಿರುವುದು. 
ಚಿಕ್ಕಮಗಳೂರು

ಚಿಕಿತ್ಸೆ ಫಲಿಸದೆ ಎರಡೂವರೆ ತಿಂಗಳ ಮಗು ಸಾವು

ಪ್ರಮುಖ ಮುಖ್ಯಾಂಶಗಳು

  • ತೀವ್ರ ಜ್ವರ ಹಾಗೂ ವಾಂತಿ ಬೇದಿಯಿಂದ ಬಳಲುತ್ತಿದ್ದ ಎರಡೂವರೆ ತಿಂಗಳ ಮಗು ಚಿಕಿತ್ಸೆ ಫಲಿಸದೆ ಮೃತ
  • ಆಸ್ಪತ್ರೆ ಎದುರು ಪ್ರತಿಭಟನೆ
ಚಿಕ್ಕಮಗಳೂರು: ತೀವ್ರ ಜ್ವರ ಹಾಗೂ ವಾಂತಿ ಬೇದಿಯಿಂದ ಬಳಲುತ್ತಿದ್ದ ಎರಡೂವರೆ ತಿಂಗಳ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಮಗುವಿನ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಅರವಿಂದ ನಗರದ ರವೀಶ್‌ ಹಾಗೂ ತೇಜಸ್ವಿನಿ ದಂಪತಿಯ ಮಗು ಅನಾರೋಗ್ಯದಿಂದ ಮೃತಪಟ್ಟಿದೆ. ಕಳೆದ ಕೆಲ ದಿನಗಳಿಂದ ಮಗುವಿಗೆ ವಾಂತಿ ಬೇದಿ ಕಾಣಿಸಿಕೊಂಡಿತ್ತು. ಹೀಗಾಗಿ ಪಾಲಕರು ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆದರೂ ಮಗು ಚೇತರಿಸಿಕೊಳ್ಳದಿದ್ದಾಗ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು.
ಕಳೆದ ಒಂದು ದಿನದಿಂದ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದೇ ವೇಳೆಗೆ ಮಗುವಿಗೆ ಜ್ವರವೂ ಶುರುವಾಗಿತ್ತಲ್ಲದೆ ಪೀಟ್ಸ್‌ ಸಹ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಬೇಕಾದ ವೆಂಟಿಲೇಟರ್‌ ಸೌಲಭ್ಯ ಇಲ್ಲದ ಕಾರಣದಿಂದಾಗಿ ಮಗುವನ್ನು ಹಾಸನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು.
ಆಗ ಪಾಲಕರು ಮಗುವನ್ನು ಆಂಬುಲೆನ್ಸ್‌ನಲ್ಲಿ ಹಾಸನಕ್ಕೆ ಕೊಂಡೊಯ್ಯುವ ಮಾರ್ಗಮಧ್ಯದಲ್ಲಿ ಮಗುವಿಗೆ ಮತ್ತೆ ಪೀಟ್ಸ್‌ ಕಾಣಿಸಿಕೊಂಡಿದೆ. ಹೀಗಾಗಿ ಕೂಡಲೇ ಮಗುವನ್ನು ಬೇಲೂರು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು.
ಇದರಿಂದಾಗಿ ಆಕ್ರೋಶಗೊಂಡ ಮಗುವಿನ ಪಾಲಕರು ಹಾಗೂ ಸಂಬಂಧಿಕರು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಶವ ತಂದು ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಪ್ರತಿಭಟನೆ ಆರಂಭಿಸಿದರು.
ವಿಷಯ ತಿಳಿಯುತ್ತಿದ್ದಂತೆ ಕೆಲ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಆಸ್ಪತ್ರೆಯ ಹಿರಿಯ ವೈದ್ಯರು ಹಾಗೂ ಜಿಲ್ಲಾ ಸರ್ಜನ್‌ ಮಗುವಿನ ಪಾಲಕರು ಹಾಗೂ ಸಂಬಂಧಿಕರೊಂದಿಗೆ ಮಾತುಕತೆ ನಡೆಸಿ ಮಗುವಿಗೆ ಪೀಟ್ಸ್‌ ಕಾಣಿಸಿಕೊಂಡಿದ್ದರಿಂದ ಚಿಕ್ಕ ಮಗುವಿಗೆ ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಮನದಟ್ಟು ಮಾಡಿದ್ದಾರೆ. ಒಂದು ವೇಳೆ ವೈದ್ಯರ ನಿರ್ಲಕ್ಷ್ಯ ಎಂದು ನಿಮಗೆ ಎನಿಸಿದರೆ ಪೊಲೀಸ್‌ ದೂರು ನೀಡಿ ಎಂದು ತಿಳಿಸಿದ್ದಾರೆ.
ಆಗ ಮಗುವಿನ ಪಾಲಕರು ಮದುವೆಯಾದ ಎರಡು ವರ್ಷದ ಬಳಿಕ ಮಗುವಾಗಿತ್ತು. ಆದರೆ ಎರಡೂವರೆ ತಿಂಗಳಿಗೇ ಮಗು ಇನ್ನಿಲ್ಲ ಎನ್ನುವುದನ್ನು ನಮಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯಾಧಿಕಾರಿಗಳ ಎದುರು ಗೋಳಾಡಿದರು. ಜೊತೆಗೆ ವೈದ್ಯರ ವಿರುದ್ಧ ದೂರನ್ನೂ ದಾಖಲಿಸುವುದಿಲ್ಲ ಎಂದು ಹೇಳಿ ಮಗುವಿನ ಮೃತದೇಹ ಕೊಂಡೊಯ್ದಿದ್ದಾರೆ.