ಕಳಸ ತಾಲೂಕಿನ ನೇತ್ರಾವತಿ ಚಾರಣ.
ಕಳಸ: ಬೇಸಿಗೆಯ ಧಗೆ ಹಾಗೂ ಕಾಡ್ಗಿಚ್ಚಿನ ಮುಂಜಾಗ್ರತಾ ಕ್ರಮವಾಗಿ ಮೂರು ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ಪಶ್ಚಿಮಘಟ್ಟಗಳ ಪ್ರಮುಖ ಚಾರಣ ತಾಣಗಳಾದ ಕುದುರೆಮುಖ ಮತ್ತು ನೇತ್ರಾವತಿ ಪೀಕ್ ಜೂ.1ರಿಂದ ಮತ್ತೆ ಸಾರ್ವಜನಿಕರಿಗೆ ಮುಕ್ತವಾಗುತ್ತಿವೆ. ಆದರೆ ಟ್ರೆಕ್ಕಿಂಗ್ ಟಿಕೆಟ್ ಬುಕ್ಕಿಂಗ್‌ನಲ್ಲಿ ಖಾಸಗಿ ಏಜೆನ್ಸಿಗಳ ಮಾಫಿಯಾ ಜೋರಾಗಿದೆ.
ಕಾಫಿನಾಡಿನ ಕಳಸ ತಾಲೂಕು ಸೌಂದರ್ಯದ ಖನಿ. ಮುಂಗಾರು ಪೂರ್ವ ಮಳೆಗೆ ಹಸಿರು ಹೊದ್ದುಕೊಂಡಿರುವ ಈ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಕಾತರರಾಗಿದ್ದಾರೆ. ಇತ್ತ ಚಾರಣ ನಂಬಿಕೊಂಡಿದ್ದ ಸ್ಥಳೀಯ ಹೋಂ ಸ್ಟೇಗಳು, ರೆಸಾರ್ಟ್‌ಗಳು, ಹೋಟೆಲ್‌ಗಳು ಹಾಗೂ ಜೀಪ್ ಚಾಲಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ಸಂತಸದ ನಡುವೆಯೇ ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ನಲ್ಲಿ ದೊಡ್ಡ ಹಗರಣವೊಂದು ಬಯಲಿಗೆ ಬಂದಿದ್ದು, ಸ್ಥಳೀಯ ಉದ್ಯಮ ಹಾಗೂ ನಿಜವಾದ ಚಾರಣಿಗರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ.
ಜೂ.6ರ ಚಾರಣಕ್ಕಾಗಿ ಮೇ 22ರಂದು ನೇತ್ರಾವತಿ ಪೀಕ್‌ನ ಆನ್‌ಲೈನ್ ಬುಕ್ಕಿಂಗ್ ವಿಂಡೋ ಓಪನ್ ಆಗಿತ್ತು. ಆಶ್ಚರ್ಯವೆಂದರೆ ಕೇವಲ 47 ಸೆಕೆಂಡ್‌ಗಳಲ್ಲಿ ದಿನದ ಕೋಟಾದ ಒಟ್ಟು 300 ಟಿಕೆಟ್‌ಗಳೂ ಸಂಪೂರ್ಣ ಸೋಲ್ಡ್ ಔಟ್ ಆಗಿವೆ! ಹಾಗೆಯೇ ಜೂ.13ರ 300 ಟಿಕೆಟ್‌ಗಳು ಕೇವಲ 10 ನಿಮಿಷಗಳಲ್ಲಿ ಮಾಯವಾಗಿವೆ.
ಇದು ಸಾಮಾನ್ಯ ಸಾರ್ವಜನಿಕರಿಂದ ಸಾಧ್ಯವೇ ಇಲ್ಲದ ಮಾತು. ಬೆಂಗಳೂರಿನ ಕೆಲವು ಪ್ರಮುಖ ಖಾಸಗಿ ಟ್ರೆಕ್ಕಿಂಗ್ ಏಜೆನ್ಸಿಗಳು ಕಚೇರಿಗಳಲ್ಲಿ 20ರಿಂದ 25 ನೌಕರರನ್ನು ಏಕಕಾಲಕ್ಕೆ ಕಂಪ್ಯೂಟರ್ ಮುಂದೆ ಕೂರಿಸಿ, ವಿಭಿನ್ನ ಐಡಿಗಳ ಮೂಲಕ ಒಂದೇ ಸೆಕೆಂಡಿನಲ್ಲಿ ನೂರಾರು ಟಿಕೆಟ್‌ಗಳನ್ನು ಕಬಳಿಸುತ್ತಿವೆ. ಇದರಿಂದಾಗಿ ರಾಜ್ಯದ ಮೂಲೆಮೂಲೆಗಳಿಂದ ಸ್ವತಂತ್ರವಾಗಿ ಬರಬಯಸುವ ನಿಜವಾದ ಚಾರಣಿಗರಿಗೆ ಒಂದೇ ಒಂದು ಟಿಕೆಟ್ ಕೂಡ ಸಿಗದಂತಾಗಿದೆ.
ಕ್ಲಬ್‌ಗಳು ಅವರ ನೌಕರರ ಮೂಲಕ ಆರಂಭದಲ್ಲೇ 40-50 ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳುತ್ತವೆ. ಟಿಕೆಟ್ ಸಿಗದೆ ಹತಾಶರಾಗಿರುವ ಪ್ರವಾಸಿಗರಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಈ ವಾರ ನೇತ್ರಾವತಿ ಸ್ಲಾಟ್ಸ್ ಲಭ್ಯವಿದೆ ಎಂದು ಆರ್ ಇಡುತ್ತವೆ. ಕೇವಲ 500 ರೂ.ನ ಅರಣ್ಯ ಇಲಾಖೆಯ ಅಧಿಕೃತ ಟಿಕೆಟ್ ಅನ್ನು ಒಳಗೊಂಡಂತೆ, ಒಬ್ಬರಿಗೆ 3,500ರಿಂದ 4,000 ರೂ.ನ ದುಬಾರಿ ಪ್ಯಾಕೇಜ್ ನಿಗದಿಪಡಿಸಲಾಗುತ್ತದೆ. ಮುಗ್ಧ ಪ್ರವಾಸಿಗರು ಒಪ್ಪಿಕೊಂಡ ನಂತರ ಮೊದಲೇ ಕಾಯ್ದಿರಿಸಿದ ಟಿಕೆಟ್‌ಗಳಿಗೆ ಇವರ ಆಧಾರ್ ಕಾರ್ಡ್ ಹಾಗೂ ಐಡಿಗಳನ್ನು ಲಿಂಕ್ ಮಾಡಲಾಗುತ್ತದೆ. ಪ್ರಸ್ತುತ ಕಾಳಸಂತೆಯಲ್ಲಿ ನೇತ್ರಾವತಿ ಟಿಕೆಟ್‌ಗಳು 2000ರಿಂದ 4000 ರೂ.ಗೆ ರಾಜಾರೋಷವಾಗಿ ಮಾರಾಟವಾಗುತ್ತಿವೆ.