ತಾಲೂಕು ಆಸ್ಪತ್ರೆ ಮುಂಭಾಗದ ಹಳೆಯ ಕಾರು ಮಾರಾಟದ ಮಳಿಗೆ ಕುಸಿದು ಕಾರುಗಳಿಗೆ ಹಾನಿಯಾಗಿದೆ.
ಮೂಡಿಗೆರೆ: ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ ಆರಂಭವಾದ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದರಿಂದ ಸಾಕಷ್ಟು ಅನಾಹುತ ಸಂಭವಿಸಿದೆ.
ಮಳೆ, ಗಾಳಿಯ ರಭಸಕ್ಕೆ ಹ್ಯಾಂಡ್‌ಪೋಸ್ಟ್ ನಿಂದ ಬಿಳಗುಳದವರೆಗೆ ಚಿಕ್ಕಮಗಳೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ 5 ಕಿ.ಮೀ ದೂರ ವಾಹನಗಳು ಸಾಲುಕಟ್ಟಿ ನಿಂತಿದ್ದವು. ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪಟ್ಟಣಕ್ಕೆ ಅಗ್ನಿಶಾಮಕ ದಳದ ವಾಹನ ಬರುವಂತೆ ತಾಲೂಕು ಆಡಳಿತದಿಂದ ಸೂಚಿಸಲಾಯಿತು. ಅದರಂತೆ ಅಗ್ನಿಶಾಮಕದಳದ ವಾಹನ ಬಿದರಹಳ್ಳಿಯ ಅಗ್ನಿಶಾಮಕ ಠಾಣೆಯಿಂದ ಪಟ್ಟಣಕ್ಕೆ ಬರುವಾಗ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದ್ದರಿಂದ ಅಗ್ನಿಶಾಮಕ ವಾಹನ ಪಟ್ಟಣಕ್ಕೆ ತಲುಪಲು ಸರಸಾಹಸ ಪಡಬೇಕಾಯಿತು.
ಕೆ.ಎಂ.ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದೆ ತೆಂಗಿನ ಮರ, ಪರಿಮಳಮ್ಮ ದೇವಸ್ಥಾನದ ಆವರಣದಲ್ಲಿದ್ದ ಮರ, ಬಾಲಕಿಯರ ಕಾಲೇಜು ಮುಂಭಾಗದ ಮರಗಳು ರಸ್ತೆಗೆ ಬಿದ್ದಿದೆ. ಎಲ್ಲ ಮರಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ತೆರವುಗೊಳಿಸಿದರು. ಗಂಗನಮಕ್ಕಿ ಬಡಾವಣೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಚಾಲಾವೃತವಾಗಿತ್ತು. ಪಟ್ಟಣದ ಬಹುತೇಕ ಅಂಗಡಿಗಳ ನಾಮಫಲಕ ಹಾರಿಹೋಗಿದೆ. ಬಸ್‌ನಿಲ್ದಾಣದ ಆವರಣ ಗಂಗನಮಕ್ಕಿ ಬಡಾವಣೆ, ಮತ್ತಿತರ ಕಡೆ ಬೀದಿ ಬದಿ ವ್ಯಾಪಾರಿಗಳ ಟೆಂಟ್ ಗಾಳಿಗೆ ಹಾರಿ ಹೋಗಿದೆ. ಕೆ.ಎಂ.ರಸ್ತೆಯ ಖಾಸಗಿ ಅಂಗಡಿ ಮಳಿಗೆಗೆ ಹಾನಿಯಾಗಿದೆ.
ಬಾಲಕಿಯರ ಪ್ರೌಢಶಾಲೆ ಕಟ್ಟಡದ ಮೇಲಿದ್ದ ನೀರಿನ ಸಿಂಟೆಕ್ಸ್ ಹಾರಿಹೋಗಿದೆ. ಚರ್ಚ್ ಎದುರಿನ ಚಪ್ಪಲಿ ಅಂಗಡಿ ಮಗುಚಿ ಬಿದ್ದಿದೆ. ಬಾಲಕರ ಪ್ರೌಢಶಾಲೆ ಕಟ್ಟಡದ ಹೆಂಚು ಹಾರಿ ಹೋಗಿ ಕಟ್ಟಡಕ್ಕೆ ಹಾನಿಯಾಗಿದೆ. ಹೊಯ್ಸಳ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗೆ ಅಳವಡಿಸಿದ್ದ ಸಲಕರಣೆಗಳು ಹಾರಿಹೋಗಿವೆ. ಸಂತ ಮಾರ್ತಾಸ್ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು ಕಟ್ಟಡದ ಛಾವಣಿ ಕುಸಿದಿದೆ. ಕಟ್ಟಡದ ಆವರಣದಲ್ಲಿ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಅಂಗಡಿ ಮಳಿಗೆ ನಾಮಫಲಕ ಹಾರಿ ಜೀಪ್‌ಮೇಲೆ ಬಿದ್ದು, ಜೀಪ್ ಜಖಂಗೊಂಡಿದೆ. ತಾಲೂಕು ಆಸ್ಪತ್ರೆ ಎದುರಿನಲ್ಲಿರುವ ಹಳೆಯ ಕಾರು ಮಾರಾಟದ ಮಳಿಗೆ ಸಂಪೂರ್ಣ ಕುಸಿದು ಕಾರುಗಳಿಗೆ ಹಾನಿಯಾಗಿದೆ. ಪ್ರವಾಸಿ ಮಂದಿರದ ಆವರಣದ ಮರಗಳು ಧರೆಗುರುಳಿದೆ.