ಎನ್.ಆರ್.ಪುರ: ಜೂನ್ 20 ರಿಂದ 29ರವರೆಗೆ ಬಿಎಲ್ಒಗಳು ಮತದಾರರ ಪಟ್ಟಿಗಳ ಪರಿಷ್ಕರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಜೂನ್ 2ರಂದು ಕಾಂಗ್ರೆಸ್ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ನಡೆ ನಿಮ್ಮ ಮತ ರಕ್ಷಣೆ ಕಡೆ ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ಮತಹಕ್ಕು ರಕ್ಷಣೆ ಅಭಿಯಾನ ಹಮ್ಮಿಕೊಂಡಿದೆ. ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲಾ ವ್ಯಾಪ್ತಿಯ ಪ್ರತಿ ವಿಧಾನ ಕ್ಷೇತ್ರದಿಂದ 6 ರಿಂದ 8 ಜನ ಕಾಂಗ್ರೆಸ್ ಮುಖಂಡರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಮುಖಂಡರು ಪಕ್ಷದ ಬೂತ್ ಮಟ್ಟದ ಏಜೆಂಟರುಗಳಿಗೆ ತರಬೇತಿ ನೀಡುತ್ತಾರೆ ಎಂದರು.
ಬಿಎಲ್ಒಗಳು ಮನೆಗೆ ಬರುವ ಮುನ್ನಾ ಐಡಿ ಕಾರ್ಡ್, ಆಧಾರ ಕಾರ್ಡ್ ಸೇರಿದಂತೆ 13 ದಾಖಲೆಗಳನ್ನು ಸಿದ್ದಪಡಿಸಿಕೊಂಡಿರ ಬೇಕು. ಎಸ್‌ಐಆರ್‌ನಲ್ಲಿ ಎರಡು ಫಾರ್ಮ್‌ಗಳಿದ್ದು ಒಂದು ಫಾರ್ಮ್ ಬಿಎಲ್ಒಗಳು ತೆಗೆದುಕೊಂಡು ಹೋಗಲಿದ್ದಾರೆ. ಇನ್ನೊಂದು ಮತದಾರರಿಗೆ ನೀಡಲಿದ್ದಾರೆ. ಎಸ್‌ಐಆರ್‌ನಲ್ಲಿ ಮತದಾರರು ಪಟ್ಟಿಯಿಂದ ಹೊರಗೆ ಹೋದರೆ ಮುಂದೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ. ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಎಸ್‌ಐಆರ್ ಬಗ್ಗೆ ತಿಳಿದುಕೊಂಡು ಮತದಾರರ ಪಟ್ಟಿಯಿಂದ ಹೊರಗಡೆ ಹೋಗದಂತೆ ಜಾಗ್ರತೆ ವಹಿಸಬೇಕು. ಬಿಜೆಪಿ ಶ್ರಮಿಕ ವರ್ಗದ ಮತದಾರರನ್ನು ಹೊರಗಡೆ ಇಡಲು ಎಸ್‌ಐಆರ್ ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಇ.ಸಿ.ಜೋಯಿ, ಶ್ರೀಧರ್ ಪಾನಿ, ಕೆ.ವಿ.ಸಾಜು, ಎಸ್.ಡಿ.ರಾಜೇಂದ್ರ, ಮಾಳೂರುದಿಣ್ಬೆ ರಮೇಶ್, ಬೆನ್ನಿ, ಜುಬೇದಾ, ಸುನೀಲ್ ಕುಮಾರ್, ಎಚ್.ಎಂ.ಶಿವಣ್ಣ, ಬಿಳಾಲು ಮನೆ ಉಪೇಂದ್ರ ಮತ್ತಿತರರು ಇದ್ದರು.