ಕುದುರೆಮುಖ ರಸ್ತೆಯ ಗಂಗಡಿಕಲ್ ಚಾರಣ ಹೋಗುವ ಸ್ಥಳದಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು. 
ಚಿಕ್ಕಮಗಳೂರು

ಸೂಕ್ಷ್ಮ ಪರಿಸರದೊಳಗೆ ಪ್ರವಾಸಿಗರ ಹುಚ್ಚಾಟ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ನಿಯಮ ಪಾಲಿಸದ
  • ಪ್ರವಾಸಿಗರು
ಸುಧೀಶ್ ಸುವರ್ಣ ಕಳಸ
ಹಚ್ಚಹಸಿರಿನ ಬೆಟ್ಟಗಳು, ಮಂಜಿನ ಹೊದಿಕೆ, ಅಪರೂಪದ ಜೀವ ವೈವಿಧ್ಯತೆಗೆ ಹೆಸರಾದ ಕಳಸದ ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಬೇಜವಾಬ್ದಾರಿ ಮತ್ತು ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದೆ. ವಿಶೇಷವಾಗಿ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಸೂಕ್ಷ್ಮ ಪರಿಸರಕ್ಕೆ ಹಾನಿಯಾಗುವಂತೆ ವರ್ತಿಸುತ್ತಿದ್ದಾರೆ. 
ಕಗ್ಗುಂಡಿ, ಭಗವತಿ, ಗಂಗಾಮೂಲ, ಕಡಂಬಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲೇ ವಾಹನಗಳನ್ನು ಸಾಲು ಸಾಲಾಗಿ ನಿಲ್ಲಿಸಿಕೊಂಡು ಫೋಟೋಶೂಟ್, ವಿಡಿಯೋ ಚಿತ್ರೀಕರಣ ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಾಹನಗಳಲ್ಲಿ ಜೋರಾಗಿ ಸಂಗೀತ ಹಾಕಿಕೊಂಡು ಕುಣಿಯುವುದು, ಕಿರಿಚಾಡುವುದು, ರಸ್ತೆ ಮಧ್ಯೆ ನಿಂತು ವಿಡಿಯೋ ಮಾಡುವುದು ಸಾಮಾನ್ಯವಾಗಿದೆ. ಈ ರೀತಿಯ ವರ್ತನೆಯಿಂದ ಒಂದೆಡೆ ಹೆದ್ದಾರಿಯಲ್ಲಿ ಸಂಚರಿಸುವ ಇತರ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಮತ್ತೊಂದೆಡೆ ಅರಣ್ಯ ಪ್ರದೇಶದ ನೈಸರ್ಗಿಕ ಶಾಂತಿ ಭಂಗವಾಗುತ್ತಿದೆ. ಕಾಡುಪ್ರಾಣಿಗಳು, ಪಕ್ಷಿಗಳ ಸ್ವಚ್ಛಂದ ವಿಹಾರಕ್ಕೆ ತೊಂದರೆ ಉಂಟಾಗುತ್ತಿದೆ. 
ಕೆಲವರು ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಿ ಮದ್ಯಪಾನ ಮಾಡುವುದು, ಪ್ಲಾಸ್ಟಿಕ್ ಬಾಟಲಿ, ಆಹಾರದ ಪ್ಯಾಕೆಟ್ ಇತರ ತ್ಯಾಜ್ಯಗಳನ್ನು ಎಸೆಯುತ್ತಿರುವುದು ಪರಿಸರಕ್ಕೆ ಮತ್ತಷ್ಟು ಹಾನಿ ಉಂಟುಮಾಡುತ್ತಿದೆ. ಮದ್ಯದ ಅಮಲಿನಲ್ಲಿ ಗದ್ದಲ ಮಾಡುವುದು, ಅಪಾಯಕಾರಿ ರೀತಿಯಲ್ಲಿ ವಾಹನ ನಿಲ್ಲಿಸುವುದು ಅಪಘಾತದ ಸಾಧ್ಯತೆಯನ್ನೂ ಹೆಚ್ಚಿಸಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅಪರೂಪದ ವನ್ಯಜೀವಿಗಳು ಹಾಗೂ ಪಕ್ಷಿಗಳ ಆಶ್ರಯ ತಾಣವಾಗಿದೆ. ಈ ರಸ್ತೆಯಲ್ಲೇ ಜಿಂಕೆ, ಕಾಡುಕೋಣ, ಸಿಂಗಳಿಕ, ಮಂಗ, ಕಾಡುಪಾಪ, ಚಿರತೆ ನೇರಿದಂತೆ ಅನೇಕ ಪ್ರಾಣಿಗಳು, ವಿವಿಧ ಜಾತಿಯ ಪಕ್ಷಿಗಳು, ಹಾವುಗಳು ಸೇರಿದಂತೆ ಅನೇಕ ಜೀವಿಗಳು ಸಂಚರಿಸುತ್ತವೆ. ವಾಹನಗಳ ಹಾರ್ನ್, ಜೋರಾದ ಸಂಗೀತ, ಜನರ ಗದ್ದಲ ಹಾಗೂ ಅತಿಯಾದ ಮಾನವ ಚಟುವಟಿಕೆಯಿಂದ ಅವುಗಳ ಸಹಜ ಜೀವನಕ್ಕೆ ಧಕ್ಕೆ ಉಂಟಾಗುತ್ತಿದೆ.  
ಕುದುರೆಮುಖದಂಥ ಸೂಕ್ಷ್ಮ ಪರಿಸರ ಪ್ರದೇಶಗಳು ಕೇವಲ ಪ್ರವಾಸಿ ತಾಣಗಳಲ್ಲ. ಅವು ಜೀವವೈವಿಧ್ಯದ ಅಮೂಲ್ಯ ಸಂಪತ್ತು. ಪ್ರವಾಸಿಗರು ಪ್ರಕೃತಿಯನ್ನು ನೋಡಿ ಸಂಭ್ರಮಿಸುವುದರ ಜತೆಗೆ ಅದರ ಸಂರಕ್ಷಣೆಯ ಜವಾಬ್ದಾರಿಯನ್ನೂ ಅರಿತು ವರ್ತಿಸಬೇಕು. ಇಲ್ಲವಾದರೆ ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರಕ್ಕೆ ಆಗುತ್ತಿರುವ ಹಾನಿ ಗಂಭೀರ ಸ್ವರೂಪ ಪಡೆದುಕೊಳ್ಳುವ ಅಪಾಯವಿದೆ.   
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರವೇಶದ ಬಸ್ರಿಕಲ್ ಚೆಕ್‌ಪೋಸ್ಟ್‌ನಲ್ಲಿ ಅರಣ್ಯ ಇಲಾಖೆ ವಾಹನಗಳಿಗೆ ಪಾಸ್ ನೀಡುತ್ತಿದೆ. ಶೃಂಗೇರಿ ಕಡೆಗೆ ತೆರಳುವವರು ಕೆರೆಕಟ್ಟೆ ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ಹಾಗೂ ಕಾರ್ಕಳ ಕಡೆಗೆ ತೆರಳುವವರು ಮಾಳ ಚೆಕ್‌ಪೋಸ್ಟ್‌ನಲ್ಲಿ ನಿಗದಿತ ಸಮಯದೊಳಗೆ ಪಾಸ್ ಹಿಂತಿರುಗಿಸಬೇಕು ಎಂಬ ನಿಯಮವಿದೆ. ಆದರೆ ಅನೇಕ ಪ್ರವಾಸಿಗರು ಅವರಿಗೆ ನಿಗದಿಪಡಿಸಿರುವ ಸಮಯಕ್ಕಿಂತ ಹೆಚ್ಚು ಕಾಲ ಅರಣ್ಯ ಪ್ರದೇಶದಲ್ಲೇ ತಂಗಿ ಮನಬಂದಂತೆ ಓಡಾಡುತ್ತಿರುವುದು ಕಂಡುಬರುತ್ತಿದೆ. ಇದರಿಂದ ಪಾಸ್ ವ್ಯವಸ್ಥೆಯ ಉದ್ದೇಶವೇ ಹಾಳಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಅರಣ್ಯ ಇಲಾಖೆ ನೀಡುವ ಪಾಸ್‌ನಲ್ಲಿ ಸ್ಪಷ್ಟ್ಟವಾಗಿ ನಿರ್ಬಂಧಗಳನ್ನು ಉಲ್ಲೇಖಿಸಲಾಗಿದೆ. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಬಾರದು, ವಿಡಿಯೋ ಚಿತ್ರೀಕರಣ ಮಾಡಬಾರದು, ತ್ಯಾಜ್ಯ ಎಸೆಯಬಾರದು, ಮದ್ಯಪಾನ ನಿಷಿದ್ಧ, ಕಾಡುಪ್ರಾಣಿಗಳಿಗೆ ಆಹಾರ ನೀಡಬಾರದು ಹಾಗೂ ಪರಿಸರಕ್ಕೆ ಹಾನಿಯಾಗುವ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಸೂಚಿಸಲಾಗಿದೆ. ಆದರೆ ವಾಸ್ತವವಾಗಿ ಈ ಯಾವುದೇ ನಿಯಮಗಳು ಪರಿಣಾಮಕಾರಿಯಾಗಿ ಪಾಲನೆಯಾಗುತ್ತಿಲ್ಲ. ಪ್ರವಾಸಿಗರು ನಿಯಮಗಳನ್ನು ಬಹುತೇಕ ನಿರ್ಲಕ್ಷಿಸುತ್ತಿದ್ದು, ಮೇಲ್ವಿಚಾರಣೆ ಕೊರತೆಯೂ ಇದಕ್ಕೆ ಕಾರಣವಾಗಿದೆ.
ಅರಣ್ಯ ಇಲಾಖೆ ಅಭಯಾರಣ್ಯ ವ್ಯಾಪ್ತಿಯ ಗಂಗಡಿಕಲ್ಲು, ಕುರುಂಜಲ್ ಗುಡ್ಡ ಮುಂತಾದೆಡೆ ಟ್ರಕ್ಕಿಂಗ್ ವ್ಯವಸ್ಥೆ ಮಾಡಿದೆ. ಇಲ್ಲಿಗೆ ಅರಣ್ಯ ಇಲಾಖೆಯೇ ಸಫಾರಿ ವಾಹನ ವ್ಯವಸ್ಥೆ ಮಾಡಬೇಕು. ಆದರೆ ಇಲ್ಲಿ ಪ್ರವಾಸಿಗರ ವಾಹನಕ್ಕೆ ಇಲಾಖೆ ಅನುಮತಿ ನೀಡಿ, ಟ್ರಕ್ಕಿಂಗ್ ಹೋಗುವ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಇದೇ ರಸ್ತೆಯಲ್ಲಿ ನಿತ್ಯ ಹಲವಾರು ಬಾರಿ ಇಲಾಖೆಯ ವಾಹನ ತಿರುಗಾಡುತ್ತಿದ್ದರೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳತ್ತಿರುವುದು ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.